ಮಧೂರು: ದೇವಾಲಯದ ಮಹಾದ್ವಾರ, ದೇಗುಲಗಳ ಶೋಭೆ ಹೆಚ್ಚಿಸುವುದರ ಜತೆಗೆ ಭಕ್ತಾದಿಗಳಲ್ಲಿನ ಭಕ್ತಿಯ ಉದ್ದೀಪನಕ್ಕೆ ಸಹಕಾರಿಯಾಗುತ್ತದೆ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ.
ಅವರು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳ ಹಿನ್ನೆಲೆಯಲ್ಲಿ ಧಾರ್ಮಿಕ ಮುಂದಾಳು, ಖ್ಯಾತ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅವರು ನೂತನಾಗಿ ನಿರ್ಮಿಸಿ ದೇವಾಲಯಕ್ಕೆ ಸಮರ್ಪಿಸಲಿರುವ 'ಮಹಾದ್ವಾರ'ದ ಶಿಲಾನ್ಯಾಸದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ದಾನಿಗಳ ಸಹಕಾರದಿಂದ ಮಾತ್ರ ಇಂತಹ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರೈಸಲು ಸಾಧ್ಯ. ಈ ನಿಟ್ಟಿನಲ್ಲಿ ಉದ್ಯಮಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅವರ ಕೊಡುಗೆ ಅನನ್ಯವಾದುದು ಎಂದು ತಿಳಿಸಿದರು.
ಬಾಗುವ ಶರೀರ....:
ಕೊಡುಗೈ ದಾನಿ, ಧಾರ್ಮಿಕ ಮುಂದಾಳು ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅವರದು ಬಾಗುವ ಶರೀರ, ಅವರು ಎಂದಿಗೂ ಬೀಗುವ ಜಾಯಮಾನದವರಲ್ಲ. ಸ್ವಭೋಗಕ್ಕಾಗಿ ದೇವರು ಕೊಟ್ಟ ಸಂಪತ್ತನ್ನು ಸಮಾಜಕ್ಕೆ ಧಾರೆ ಎರೆಯುವ ಮೂಲಕ ದಿನ ದಲಿತರ ಏಳಿಗೆಯಲ್ಲಿ ಸಂತಸ ಕಂಡುಕೊಂಡ ದಾನಿಗಳಾಗಿದ್ದರೆ ಎಂದು ಎಡನೀರು ಶ್ರೀಗಳು ತಿಳಿಸಿದರು.
ನವೀಕರಣ ಸಮಿತಿ ಅಧ್ಯಕ್ಷ ಯು.ಟಿ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಶಿಲಾನ್ಯಾಸ ನೆರವೇರಿಸಿದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಭಾರತ ದೇಶದ ಆಂತರ್ಯ ಆಧ್ಯಾತ್ಮಿಕವಾಗಿದ್ದು, ಇಲ್ಲಿ ನಂಬಿಕೆಯ ತಳಹದಿಯಲ್ಲೇ ಎಲ್ಲಾ ಕಾರ್ಯ ನಡೆಯುತ್ತದೆ. ಮದರು ಮಾತೆಯ ಪುಣ್ಯ ಭೂಮಿಯ ದೇಗುಲದಲ್ಲಿ ನಡೆದುಬರುತ್ತಿರುವ ಜೀರ್ಣೋದ್ಧಾರ ಕಾರ್ಯ ನಿಜಾರ್ಥದ ನಿಸ್ವಾರ್ಥ ಸೇವೆಯ ದ್ಯೋತಕವಾಗಿದೆ. ನಾಲ್ಕೂರ ಜನತೆ ಒಟ್ಟಾಗಿ ಸೇರಿ ಕೈಗೊಳ್ಳುತ್ತಿರುವ ಮಧೂರು ದೇಗುಲದ ಅಭಿವೃದ್ಧಿ ಕಾರ್ಯಗಳಿಗೆ ಮಹಾದ್ವಾರ ಕಳಶಪ್ರಾಯವಾಗಲಿರುವುದಾಗಿ ತಿಳಿಸಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಧಾರ್ಮಿಕ ಪ್ರವೃತ್ತಿ ಜಾಗೃತಿಯಾದಾಗ ಆರೋಗ್ಯ ಪೂರ್ಣ ಸಮಾಜದ ನಿರ್ಮಾಣ ಸಾಧ್ಯ. ಭಾವನೆ, ಕರ್ಮಾಸಿದ್ಧಾಂತ ಒಂದಾದಾಗ ಜೀರ್ಣೋದ್ಧಾರ ಪ್ರಕ್ರಿಯೆಗಳೂ ಶೀಘ್ರ ನೆರವೇರಲು ಸಾಧ್ಯ ಎಂದು ತಿಳಿಸಿದರು. ಉಪ್ಪಳ ಕೊಮಡೆವೂರು ಶ್ರೀ ಯೋಗಾನಂದ ಸರಸ್ವತೀ ಸವಾಮೀಜಿ ಆಶೀರ್ವಚನ ನಿಡಿ, ಸಮಾಜ, ಮಂದಿರಗಳಿಗೆ ನಮ್ಮ ಸಂಪತ್ತು ವಿನಿಯೋಗವಾದಾಗ ಭಗವಂತನೂ ಸಂಪ್ರೀತನಾಗುತ್ತಾನೆ. ಮಹಾದ್ವಾರ ನಿರ್ಮಾಣದಿಂದ ದೇಗುಲದ ಪಾವಿತ್ರ್ಯತೆ ಮತ್ತಷ್ಟು ಹೆಚ್ಚಲು ಸಾಧ್ಯವಾಗಲಿದೆ. ಸೀಮೆಯ ಪ್ರಮುಖ ದೆವಾಲಯದಲ್ಲಿ ಒಂದಾದ ಮಧೂರು ಕ್ಷೇತ್ರದ ಜೀರ್ಣೋದ್ಧಾರ ಪ್ರಕ್ರಿಯೆ ಶೀಘ್ರ ಪೂರ್ತಿಗೊಂಡು ಬ್ರಹ್ಮಕಲಶೋತ್ಸವ ದಿನ ನಿಗದಿಯಾಗಲಿ ಎಂದು ಹಾರೈಸಿದರು.
ದೇವಸ್ಥಾನ ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಆರೆಸ್ಸೆಸ್ ಅಖಿಲ ಭಾರತೀಯ ಕುಟುಂಬ ಪ್ರಬೋಧನ್ ಟೋಳಿ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಮಧೂರು ಗ್ರಾಪಂ ಅಧ್ಯಕ್ಷ ಕೆ. ಗೋಪಾಲಕೃಷ್ಣ, ಮಲಬಾರ್ ದೇವಸ್ವಂ ಬೋರ್ಡ್ ಆಯುಕ್ತ ಪಿ. ನಂದಕುಮಾರ್, ಸಹಾಯಕ ಆಯುಕ್ತರಾದ ಪಿ.ಕೆ ಪ್ರದೀಪ್ ಕುಮಾರ್, ಟಿ.ಸಿ ಬಿಜು, ಅದಾನಿ ಗ್ರೂಪ್ ನಿರ್ದೇಕ ಕಿಶೋರ್ ಆಳ್ವ, ಮಲಬಾರ್ ದೇವಸ್ವಂ ಬೋರ್ಡ್ ಕಾಸರಗೋಡು ವಿಭಾಗ ಅಧ್ಯಕ್ಷ ಕೊಟ್ಟರ ವಾಸುದೇವನ್, ಸದಸ್ಯ ಶಂಕರ ರೈ ಮಾಸ್ಟರ್, ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಟ.ಸಿ ªಕೃಷ್ಣ ವರ್ಮ ರಆಜ, ಉದ್ಯಮಿ, ಮುಂಡಪಳ್ಳ ರಾಜರಾಜೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಕೆ.ಕೆ ಶೆಟ್ಟಿ, ಮಾಜಿ ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಗ್ರಾಮ ಚಾವಡಿ ಆಡಳಿತ ಮೊಕ್ತೇಸರ ಶಶಿಧರ ಶೆಟ್ಟಿ, ಡಾ. ಬಿ.ಎಸ್ ರಾವ್, ಮಧೂರು ಗ್ರಾಪಂ ಉಪಾಧ್ಯಕ್ಷೆ ಸ್ಮಿಜಾ ವಿನೋದ್ ಉಪಸ್ಥಿತರಿದ್ದರು. ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯಾಐ ಹಾಗೂ ಬಳ್ಳಪದವು ಯೋಗೀಶ್ ಶರ್ಮ ಪ್ರಾರ್ಥನೆ ಹಾಡಿದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಜಯದೇವ ಖಂಡಿಗೆ ಸ್ವಾಗತಿಸಿದರು. ಗಿರೀಶ್ ಕೆ. ವಂದಿಸಿದರು.