ನವದೆಹಲಿ: ಲೋಕಸಭೆಯ ನೀತಿ ನಿಯಮ ಸಮಿತಿ ಸಭೆಯಿಂದ ಸಂಸದೆ ಮಹುವಾ ಮೊಯಿತ್ರಾ ಮತ್ತು ವಿಪಕ್ಷಗಳ ಸದಸ್ಯರು ಸಿಡಿದು ಹೊರಬಂದಿದ್ದಾರೆ.
ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಹಣ ಪಡೆದ ಆರೋಪ ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ಅವರ ವಿಚಾರಣೆಗೆ ಸಮಿತಿ ಸಭೆ ಸೇರಿತ್ತು.
'ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರಿಗೆ ಲೋಕಸಭೆಯ ನೀತಿ ನಿಯಮ ಸಮಿತಿ ಅಧ್ಯಕ್ಷರು ಕೇಳಿದ ಪ್ರಶ್ನೆಗಳನ್ನು ಅಮಾನವೀಯ, ಅಸಂಬದ್ಧವಾಗಿದ್ದವು ಎಂದು ಕಾಂಗ್ರೆಸ್ ಸಂಸದ ಎನ್ ಉತ್ತಮ್ ಕುಮಾರ್ ರೆಡ್ಡಿ ಹೇಳಿದ್ದಾರೆ.
ಮೊಯಿತ್ರಾ ಮತ್ತು ಇತರ ಸದಸ್ಯರು ಹೊರಬಂದ ನಂತರವೂ ಸಮಿತಿಯು ತನ್ನ ಚರ್ಚೆಯನ್ನು ಮುಂದುವರೆಸಿತ್ತು.
ವಕೀಲ ಜೈ ಅನಂತ್ ದೇಹದ್ರಾಯ್ ಅವರೊಂದಿಗಿನ ವೈಯಕ್ತಿಕ ಸಂಬಂಧವನ್ನು ಮುರಿದುಕೊಂಡ ನಂತರ ತಮ್ಮ ವಿರುದ್ಧ ದ್ವೇಷದಿಂದ ಈ ಆರೋಪವನ್ನು ಮಾಡಲಾಗಿದೆ ಎಂದು ಮಹುವಾ ಸಂಸದೀಯ ಸಮಿತಿಗೆ ತಿಳಿಸಿದ್ದರು.
ಕಾಂಗ್ರೆಸ್‌ನ ಎನ್. ಉತ್ತಮ್ ಕುಮಾರ್ ರೆಡ್ಡಿ ಮತ್ತು ಬಿಎಸ್‌ಪಿಯ ಡ್ಯಾನಿಶ್ ಅಲಿ ಸೇರಿದಂತೆ ಕೆಲವು ವಿರೋಧ ಪಕ್ಷದ ಸಂಸದರಿಂದ ಅವರಿಗೆ ಬೆಂಬಲ ಸಿಕ್ಕಿದೆ.
ಮೂಲಗಳ ಪ್ರಕಾರ, ಲೋಕಸಭೆಯ ನೀತಿ ಸಮಿತಿಯ ಮುಂದೆ ಮಹುವಾಗೆ ಎದುರಾದ ಬಹುಪಾಲು ಪ್ರಶ್ನೆಗಳು ವಕೀಲ ದೇಹದ್ರಾಯ್ ಅವರೊಂದಿಗಿನ ಸಂಬಂಧದ ಬಗ್ಗೆಯೇ ಆಗಿದ್ದವು. ವಿ.ಡಿ. ಶರ್ಮಾ ಸೇರಿದಂತೆ ಕೆಲವು ಬಿಜೆಪಿ ಸದಸ್ಯರು ಆರೋಪಗಳ ಕುರಿತಂತೆ ಮಹುವಾ ಅವರಿಂದ ಪ್ರತಿಕ್ರಿಯೆ ಬಯಸಿದ್ದರು.
ಪ್ರಶ್ನೆ ಕೇಳಲು ಹಣ ಪಡೆದಿರುವ ಕುರಿತಂತೆ ದೇಹದ್ರಾಯಿ ಅವರ ಆರೋಪಗಳನ್ನು ಉಲ್ಲೇಖಿಸಿ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ಸಲ್ಲಿಸಿದ್ದರು.
ಉದ್ಯಮಿ ದರ್ಶನ್ ಹಿರಾನಂದಾನಿ ಅವರ ಆಣತಿಯಂತೆ, ಮೊಯಿತ್ರಾ ಅವರ ಸಂಸದೀಯ ಇ-ಮೇಲ್ ಖಾತೆ ಮೂಲಕ ಪ್ರಶ್ನೆಗಳನ್ನು ಟೈಪ್ ಮಾಡಲಾಗುತ್ತಿತ್ತು. ಇದಕ್ಕೆ ಪ್ರತಿಯಾಗಿ ಮೊಯಿತ್ರಾ ಅವರಿಗೆ ಹಣ, ಉಡುಗೊರೆಗಳನ್ನು ನೀಡಲಾಗುತ್ತಿತ್ತು ಎಂದು ದುಬೆ ಆರೋಪಿಸಿದ್ದರು.
ತನ್ನ ಸಂಸದೀಯ ಖಾತೆ ಲಾಗಿನ್‌ಗೆ ಸಂಬಂಧಿಸಿದ ವಿವರಗಳನ್ನು ಹಿರಾನಂದಾನಿ ಅವರೊಂದಿಗೆ ಹಂಚಿಕೊಂಡಿದ್ದಾಗಿ ಮೊಯಿತ್ರಾ ಒಪ್ಪಿಕೊಂಡಿದ್ದರು.