ಇತ್ತೀಚೆಗೆ ನಡೆದ ಅಫ್ಘಾನಿಸ್ತಾನದೊಂದಿಗಿನ ಪಂದ್ಯವೇ ಆಸ್ಟ್ರೇಲಿಯಾ ತಂಡದ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇಡೀ ವಿಶ್ವವೇ ತಿರುಗಿ ನೋಡುವಂತಹ ಪ್ರದರ್ಶನ ನೀಡಿದ್ದಾರೆ. ಕ್ರಿಕೆಟ್ ದಿಗ್ಗಜರೇ ಮ್ಯಾಕ್ಸ್‌ವೆಲ್ ಆಟಕ್ಕೆ ಬೆಚ್ಚಿಬಿದ್ದಿದ್ದಾರೆ.
ವರ್ಲ್ಡ್ ಕಪ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ವಿಶ್ವದಾಖಲೆಯನ್ನು ಬರೆದಿದ್ದೇನೋ ಸರಿ. ಆದರೆ, ಆಸ್ಟ್ರೇಲಿಯಾ ಸಂಕಷ್ಟಕ್ಕೆ ಸಿಕ್ಕಿಕೊಂಡಾಗ ಮ್ಯಾಕ್ಸ್‌ವೆಲ್ ಫೀಲ್ಡ್‌ಗೆ ಇಳಿದಿದ್ದರು. ಒಂದು ಹಂತದಲ್ಲಿ ಚೆನ್ನಾಗಿ ಆಡುತ್ತಿರುವಾಗಲೇ ಮ್ಯಾಕ್ಸ್‌ವೆಲ್‌ಗೆ ಸ್ನಾಯು ಸೆಳೆತ ಉಂಟಾಗಿತ್ತು. ಮೈದಾನದಲ್ಲಿ ಬಿದ್ದು ಒದ್ದಾಡುತ್ತಿದ್ದರು.
ಇಲ್ಲಿಗೆ ಆಸ್ಟ್ರೇಲಿಯಾದ ಆಟ ಮುಗಿದೇ ಹೋಯ್ತು ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ, ಕೆಲವು ಸಮಯದ ಬಳಿಕ ಮ್ಯಾಕ್ಸ್‌ವೆಲ್ ಎದ್ದು ಕೂತಿದ್ದರು. ಆ ಬಳಿಕ ಮ್ಯಾಕ್ಸ್‌ವೆಲ್‌ಗೆ ಅದೆಂಥಾ ಶಕ್ತಿ ಬಂತೋ ಗೊತ್ತಿಲ್ಲ. ನಿಂತಲ್ಲೇ ಬ್ಯಾಟ್ ಬೀಸುತ್ತಿದ್ದರು. ಬಾಲ್ ಬೌಂಡರಿ ಸೇರುತ್ತಿದ್ದವು.
ಸಂಕಷ್ಟದ ಸಂದರ್ಭದಲ್ಲಿಯೂ ಡಬಲ್ ಸೆಂಚುರಿ ಬಾರಿಸಿ ಮ್ಯಾಕ್ಸ್‌ವೆಲ್ ತಂಡವನ್ನು ಸೆಮಿಫೈನಲ್ ಹಂತಕ್ಕೆ ತಲುಪಿಸಿದರು. ಇದು ಕ್ರಿಕೆಟ್ ಪ್ರೇಮಿಗಳಿಗೆ ರೋಚಕ ಅಂತ ಅನಿಸಿತ್ತು. ಆದ್ರೀಗ ಸಿನಿಮಾ ಪ್ರೇಮಿಗಳಿಗೂ ಮ್ಯಾಕ್ಸ್‌ವೆಲ್ ಆಟ ರೋಚಕ ಅನಿಸುವುದಕ್ಕೆ ಶುರುವಾಗಿದೆ. ಅದಕ್ಕೆ ಕಾರಣ ಟ್ರೆಂಡಿಂಗ್ನಲ್ಲಿರುವ ಈ ವಿಡಿಯೋ..
ಮ್ಯಾಕ್ಸ್‌ವೆಲ್ ನೋವಿನಿಂದ ಮೈದಾನದಲ್ಲೇ ಮಲಗಿದ್ದಾಗ, ಸ್ವಲ್ಪ ಸಮಯದ ಬಳಿಕ ಎದ್ದು ನಿಲ್ಲುತ್ತಾರೆ. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ, ಮಜಾ ಇರೋದು ಇದಲ್ಲ. ಮ್ಯಾಕ್ಸ್‌ವೆಲ್ ವಿಡಿಯೋಗೆ ನೆಟ್ಟಿಗರೊಬ್ಬರು 'ಕಾಂತಾರ'ದ ಕ್ಲೈಮ್ಯಾಕ್ಸ್ ಸೀನ್ ಅನ್ನು ಮಿಕ್ಸ್ ಮಾಡಿದ್ದಾರೆ. ಅದು ಸಿಕ್ಕಾಪಟ್ಟೆ ಟ್ರೇಂಡ್ ಆಗುತ್ತಿದೆ.
'ಕಾಂತಾರ' ಸಿನಿಮಾದ ಕ್ಲೈಮ್ಯಾಕ್ಸ್ ಸೀನ್‌ನಲ್ಲಿ ಪಂಜುರ್ಲಿ ರಿಷಬ್ ಶೆಟ್ಟಿಯನ್ನು ಎಬ್ಬಿಸುವ ದೃಶ್ಯವನ್ನು ಮ್ಯಾಕ್ಸ್‌ವೆಲ್ ವಿಡಿಯೋ ಜೊತೆ ಎಡಿಟ್ ಮಾಡಿ ಶೇರ್ ಮಾಡಿದ್ದಾರೆ. ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲೀಗ ಟ್ರೇಂಡಿಂಗ್‌ನಲ್ಲಿದೆ. ನೆಟ್ಟಿಗರು ಕೂಡ ಈ ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ.
ಈ ವಿಡಿಯೋ ಟ್ರೆಂಡ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. "ಇದು ಪಕ್ಕಾ ಕಾಂತಾರ 2" ದೃಶ್ಯ ಎಂದು ಕಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರಂತೂ 'ಕಾಂತಾರ' ಸಿನಿಮಾವನ್ನು ಹಾಡಿ ಹೊಗಳುತ್ತಿದ್ದಾರೆ.