ಬದಿಯಡ್ಕ: ಸಮಾಜ ಸುಧಾರಕರ ಜೀವನ-ಸಾಧನೆಗಳನ್ನು ಮುಂದಿನ ತಲೆಮಾರಿಗೆ ಪರಿಚಯಿಸುವುದು ಕಾಲದ ಅಗತ್ಯ. ಯಾಕೆಂದರೆ ಅಂತವರು ಸಾರ್ವಕಾಲಿಕ ಸ್ಮರಣೀಯರು ಎಂದು ಉಪನ್ಯಾಸಕ ಯಶವಂತ ಡಿ. ಕುದ್ರೋಳಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅಂಬೇಡ್ಕರ್ ವಿಚಾರವೇದಿಕೆಯ ಆಶ್ರಯದಲ್ಲಿ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಭಾನುವಾರ ನಡೆದ ‘ಅರಿವಿನ ಬೆಳಕು’ ಕಾರ್ಯಕ್ರಮದಲ್ಲಿ ದೀನದಲಿತರ ಆಶಾಕಿರಣ ಕುದ್ಮಲ್ ರಂಗರಾವ್ ಅವರ ಜೀವನ-ಸಾಧನೆಗಳ ಬಗ್ಗೆ ಅವರು ಮಾತನಾಡಿದರು.
ಕಾಸರಗೋಡು ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಸ್ಪøಶ್ಯತೆಯ ವಿಷವಾಯು ಹರಡಿದ್ದ ಕಾಲಘಟ್ಟದಲ್ಲಿ ಅರಿವಿನ ಬೆಳಕು ಹಿಡಿದು ದೀನದಲಿತರನ್ನು ಉದ್ದಾರ ಮಾಡಿದ ಕುದ್ಮಲ್ ರಂಗರಾಯರು ನವೋತ್ಥಾನ ನಾಯಕರಲ್ಲಿ ಅಗ್ರಗಣ್ಯರು. ಅವರು ಹುಟ್ಟಿದ ನೆಲ ಕಾಸರಗೋಡಿನ ಒಂದು ಗ್ರಾಮ ಎನ್ನುವುದು ಅಭಿಮಾನದ ವಿಷಯ ಎಂದು ಯಶವಂತ ಡಿ. ಅಭಿಪ್ರಾಯಪಟ್ಟರು.
ನಿವೃತ್ತ ಅಭಿಯಂತರ ಪದ್ಮನಾಭ ಸಿ.ಎಚ್.ಅವರು ಕುದ್ಮಲ್ ರಂಗರಾಯರ ಭಾವಚಿತ್ರಕ್ಕೆ ಹಾರಾರ್ಪಣೆಗೈದು ನುಡಿನಮನ ಸಲ್ಲಿಸಿದರು.
ಅಂಬೇಡ್ಕರ್ ವಿಚಾರವೇದಿಕೆಯ ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಂ.ಎಸ್.ಶೇಖರ್ ಅವರ ನೇತೃತ್ವದಲ್ಲಿ ಜನ್ಮತಾಳಿದ ಅಂಬೇಡ್ಕರ್ ವಿಚಾರ ವೇದಿಕೆವೈವಿಧ್ಯಮಯ, ಜನಪರ, ಸಾಮಾಜಿಕ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಜನಜಾಗೃತಿ ಮೂಡಿಸುವಲ್ಲಿ ದಶಕಗಳಿಂದ ಮುಂದುವರಿಯುತ್ತಿರುವ ಯಶಸ್ಸಿನ ಬಗ್ಗೆ ಮಾತನಾಡಿದರು.
ಉತ್ತರ ಮಲಬಾರಿನಲ್ಲಿ ಅಸ್ಪøಶ್ಯತೆಯ ವಿರುದ್ದ ಹೋರಾಡಿ ನೋವು-ಸಂಕಟಗಳನ್ನು ಸಹಿಸಿ ದಲಿತೋದ್ದಾರವೇ ಪರಮಗುರಿಯೆಂದು ನಂಬಿ ಸಮಾಜಸೇವಾಕಾರ್ಯಗಳ ಮೂಲಕ ಕೀರ್ತಿಶೇಷರಾದ ಸ್ವಾಮಿ ಆನಂದ ತೀರ್ಥರ ಬಗ್ಗೆ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಮಾತನಾಡಿದರು. ನಿವೃತ್ತ ಗ್ರಾಮಾಧಿಕಾರಿ ಡಿ.ಕೃಷ್ಣ ದರ್ಭೆತ್ತಡ್ಕ, ಸ್ವಾಮಿ ಆನಂದತೀರ್ಥರ ಭಾವಚಿತ್ರಕ್ಕೆ ಹಾರಾರ್ಪಣೆಗೈದರು. ನಿವೃತ್ತ ಆರೋಗ್ಯಾಧಿಕಾರಿ ರಾಮಚಂದ್ರ ಮಾರ್ಪನಡ್ಕ, ಪತ್ರಕರ್ತ ರವೀಂದ್ರನ್ ಪಾಡಿ, ಸಾಮಾಜಿಕ ಕಾರ್ಯಕರ್ತ ಗಂಗಾಧರ ಗೋಳಿಯಡ್ಕ, ಸುನಂದಾ ಟೀಚರ್ ಕುಂಬಳೆ ಶುಭಹಾರೈಸಿದರು.
ಈ ಸಂದರ್ಭ ಹಿರಿಯ ಜಾನಪದ ಕಲಾವಿದೆಸೀತಮ್ಮ ಬಾರಡ್ಕ, ಕೇರಳ ರಾಜ್ಯೋದತಯ ಪ್ರಶಸ್ತಿ ಪುರಸ್ಕøತ ಶಂಕರ ಸ್ವಾಮಿಕೃಪಾ, ಗಾಯಕ ವಸಂತ ಬಾರಡ್ಕ, ಚಿತ್ರಕಲಾವಿದ ಉದಯ ಕಿಳಿಂಗಾರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ ಸನ್ಮಾನಿತರನ್ನು ಪರಿಚಯಿಸಿದರು. ವಿಜಯ ಬಾರಡ್ಕ ಸ್ವಾಗತಿಸಿ, ಸುಂದರ ಬಾರಡ್ಕ ವಂದಿಸಿದರು.