ನವದೆಹಲಿ: 'ರಾಜಧಾನಿಯಲ್ಲಿ ವಾಯು ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡದೇ ಸಂಪೂರ್ಣ ಹೊಣೆಯನ್ನು ಕೋರ್ಟ್‌ನ ಮೇಲೆ ಹೊರಿಸಬೇಡಿ' ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ದೆಹಲಿ ಸರ್ಕಾರಕ್ಕೆ ತಿಳಿಸಿತು.
'ಮಾಲಿನ್ಯ ತಡೆ ಕ್ರಮವಾಗಿ ದೆಹಲಿಯಲ್ಲಿ ಸಮ-ಬೆಸ ಸಂಖ್ಯೆಗಳ ಆಧಾರದಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವ ತೀರ್ಮಾನ ರಾಜ್ಯ ಸರ್ಕಾರದ್ದೇ ಆಗಿದೆ.
ವಾಯು ಗುಣಮಟ್ಟ ಕುರಿತ ವಿಷಯದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠ, 'ಸಮ-ಬೆಸ ಸಂಖ್ಯೆ ಆಧರಿತ ಯೋಜನೆಗೂ ಕೋರ್ಟ್‌ಗೂ ಸಂಬಂಧವಿಲ್ಲ. ನೆರೆ ರಾಜ್ಯಗಳಿಂದ ದೆಹಲಿಗೆ ಬರುವ ಟ್ಯಾಕ್ಸಿಗಳಿಗೆ ಇದು ಅನ್ವಯಿಸಬೇಕು ಎಂದೂ ಕೋರ್ಟ್ ಎಂದಿಗೂ ಹೇಳಿಲ್ಲ' ಎಂದು ಸ್ಪಷ್ಟಮಾತುಗಳಲ್ಲಿ ತಿಳಿಸಿತು.
ದೆಹಲಿ ಸರ್ಕಾರ ಈ ಹಿಂದೆ ಸಮ-ಬೆಸ ಸಂಖ್ಯೆಗಳ ಆಧಾರದಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವ ಯೋಜನೆಯನ್ನು ನವೆಂಬರ್ 13 ರಿಂದ ಜಾರಿಗೆ ತರಲಾಗುವುದು ಎಂದು ತಿಳಿಸಿತ್ತು. 'ಆಗ ಯೋಜನೆ ಎಷ್ಟು ಪರಿಣಾಮಕಾರಿ' ಎಂದು ವಿಚಾರಣೆ ವೇಳೆ ಪೀಠವು ಪ್ರಶ್ನಿಸಿತ್ತು.
ಇದಕ್ಕೆ ಪ್ರತಿಯಾಗಿ ದೆಹಲಿಯ ಪರಿಸರ ಸಚಿವ ಗೋಪಾಲ್ ರಾಯ್ ಅವರು, ಈ ವಿಷಯದ ಬಗ್ಗೆ ಕೋರ್ಟ್ ವಿಚಾರಣೆಯ ಬಳಿಕವೇ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದ್ದರು.
ದೆಹಲಿ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು, 'ನೆರೆ ರಾಜ್ಯಗಳಿಂದ ದೆಹಲಿಗೆ ಬರುವ ಟ್ಯಾಕ್ಸಿಗಳಿಗೆ ಅವಕಾಶ ನೀಡಬೇಕಾಗುತ್ತದೆ. ದೆಹಲಿಯಲ್ಲಿ ಕೆಲಸ ಮಾಡುವ ಹಲವರು ನೆರೆಯ ನೊಯ್ಡಾ, ಗುರುಗ್ರಾಮದಲ್ಲಿ ವಾಸವಿದ್ದಾರೆ' ಎಂದು ಮಾಹಿತಿ ನೀಡಿದರು.
ಈ ಹಂತದಲ್ಲಿ ನ್ಯಾಯಮೂರ್ತಿ ಕೌಲ್ ಅವರು, 'ಅದನ್ನು ಒಪ್ಪುತ್ತೇವೆ. ಟ್ಯಾಕ್ಸಿಗಳಿಗೆ ಪ್ರವೇಶ ಬೇಡ ಎಂದು ನಾವು ಎಂದಿಗೂ ಹೇಳಿಲ್ಲ. ಕೆಲಸ ಮಾಡದೇ ಎಲ್ಲ ಹೊಣೆಯನ್ನು ಕೋರ್ಟ್‌ನ ಮೇಲೆ ಹಾಕಬೇಡಿ. ಈಗ ಆಗುತ್ತಿರುವುದು ಅದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
'ನೀವು (ಸರ್ಕಾರ) ಏನನ್ನು ಮಾಡಬೇಕೋ, ಅದನ್ನು ಮಾಡಬೇಕು. ನೀವು ಏನು ಮಾಡಬೇಕು ಎಂದು ತಿಳಿಸಲು ನಾವು ಇಲ್ಲಿ ಕುಳಿತಿಲ್ಲ. ಮುಂದೆ ವಾಯುಮಾಲಿನ್ಯಕ್ಕೂ ಸುಪ್ರೀಂ ಕೋರ್ಟ್‌ನ ಆದೇಶ ಕಾರಣ ಎಂದು ನೀವು ಹೇಳಬಾರದು' ಎಂದು ಪೀಠ ಅಭಿಪ್ರಾಯಪಟ್ಟಿತು.
ದೆಹಲಿಯಲ್ಲಿ ಮಳೆ: ವಾಯು ಗುಣಮಟ್ಟ ಸುಧಾರಣೆ
ನವದೆಹಲಿ ದೆಹಲಿಯಲ್ಲಿ ಶುಕ್ರವಾರ ಮಧ್ಯಾಹ್ನ ಅಕಾಲಿಕವಾಗಿ ಮಳೆಯಾಗಿದ್ದು ವಾಯು ಗುಣಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡುಬಂದಿತು. 10 ದಿನಗಳಿಂದ ವಾತಾವರಣವನ್ನು ಆವರಿಸಿದ್ದ ಉಸಿರುಗಟ್ಟಿಸುವ ದಟ್ಟ ಮುಸುಕು ಬಹುಮಟ್ಟಿಗೆ ತಿಳಿಯಾಯಿತು. ಗಾಳಿಯ ವೇಗ ಹೆಚ್ಚಿದ್ದು ವಾಯು ಗುಣಮಟ್ಟ ಇನ್ನಷ್ಟು ಸುಧಾರಿಸಬಹುದು. ಪಂಜಾಬ್ ಹರಿಯಾಣ ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲೂ ಗುರುವಾರ ರಾತ್ರಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಧ್ಯಾಹ್ನ 1ಕ್ಕೆ ವಾಯುಗುಣಮಟ್ಟ ಸೂಚ್ಯಂಕವು 314 ಆಗಿತ್ತು. ವಾಯು ಗುಣಮಟ್ಟವು ತೀವ್ರ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ನವೆಂಬರ್ 20-21ರಂದು ಮೋಡಬಿತ್ತನೆಯ ಮೂಲಕ ಕೃತಕವಾಗಿ ಮಳೆ ಸುರಿಸುವ ಚಿಂತನೆಯನ್ನು ದೆಹಲಿ ಸರ್ಕಾರ ಹೊಂದಿತ್ತು. ಈ ಕುರಿತು ಪ್ರಸ್ತಾಪವನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲು ನಿರ್ಧರಿಸಿದೆ.
'ಸಮ-ಬೆಸ ವಾಹನ ಸಂಚಾರ ನಿಯಮ ಜಾರಿ ಮುಂದೂಡಿಕೆ'
ನವದೆಹಲಿ: ವಾಯು ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಸಮ-ಬೆಸ ಸಂಖ್ಯೆಗಳ ಆಧಾರದಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವ ಯೋಜನೆ ಜಾರಿಗೊಳಿಸುವುದನ್ನು ದೆಹಲಿ ಸರ್ಕಾರ ಮುಂದೂಡಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಗೋಪಾಲ ರಾಯ್ ನ. 13ರಿಂದ ಯೋಜನೆ ಜಾರಿಗೊಳಿಸುತ್ತಿಲ್ಲ. ವಾಯು ಗುಣಮಟ್ಟದ ಪರಿಸ್ಥಿತಿ ಪರಾಮರ್ಶಿಸಿ ದೀಪಾವಳಿಯ ನಂತರ ಈ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.