HEALTH TIPS

ಹ್ಯಾಕರ್‌ಗಳ ಬಗ್ಗೆ ಎಚ್ಚರವಿರಲಿ

 ದೇಶದ ಹಲವಾರು ಪ್ರತಿಪಕ್ಷ ನಾಯಕರು ಮತ್ತು ಪತ್ರಕರ್ತರಿಗೆ ಮೊನ್ನೆ ಸೋಮವಾರ ತಡರಾತ್ರಿ ಆಯಪಲ್‌ನಿಂದ ಎಚ್ಚರಿಕೆ ಸಂದೇಶ ಬಂತು. ಸರಕಾರಿ ಪ್ರಾಯೋಜಿತ ಹ್ಯಾಕರ್‌ಗಳು ಅವರನ್ನು ಗುರಿಯಾಗಿಸಿರುವ ಸಾಧ್ಯತೆ ಬಗ್ಗೆ ಎಚ್ಚರಿಸಿದ್ದ ಆ ಸಂದೇಶ ಹೀಗಿತ್ತು: ''ನಿಮ್ಮ ಆಯಪಲ್ ಐಡಿಯೊಂದಿಗೆ ಸಂಯೋಜಿತವಾಗಿರುವ ಐಫೋನ್ ಅನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿರುವ ಸರಕಾರಿ ಪ್ರಾಯೋಜಿತ ಹ್ಯಾಕರ್‌ಗಳು ನಿಮ್ಮನ್ನು ಗುರಿಯಾಗಿಸಿದ್ದಾರೆ ಎಂದು ಆಯಪಲ್ ಭಾವಿಸುತ್ತದೆ.''

ಈ ಎಚ್ಚರಿಕೆ ಸಂದೇಶದ ನಂತರ, ಕಾಂಗ್ರೆಸ್ ನಾಯಕರಾದ ಶಶಿ ತರೂರ್ ಮತ್ತು ಸುಪ್ರಿಯಾ ಶ್ರಿನಾಟೆ, ತೃಣಮೂಲ ಕಾಂಗ್ರೆಸ್‌ನ ಮಹುವಾ ಮೊಯಿತ್ರಾ, ಶಿವಸೇನೆಯ (ಯುಬಿಟಿ) ಪ್ರಿಯಾಂಕಾ ಚತುರ್ವೇದಿ ಮತ್ತು ಎಐಎಂಐಎಂನ ಅಸದುದ್ದೀನ್ ಉವೈಸಿ ಸೇರಿದಂತೆ ಕನಿಷ್ಠ 20 ಜನರು ಅಂಥ ಸಂದೇಶ ಸ್ವೀಕರಿಸಿರುವುದನ್ನು ಖಚಿತಪಡಿಸಿದರು.

ಆಯಪಲ್‌ನ ಎಚ್ಚರಿಕೆ ಸಂದೇಶವು ದಾಳಿಯ ಸ್ವರೂಪವನ್ನು ಉಲ್ಲೇಖಿಸದಿದ್ದರೂ, ಇದು ಐಫೋನ್ ಬಳಕೆದಾರರಿಗೆ ಅವರ ಡೇಟಾ ಮತ್ತು ಸಂವಹನದ ಸಂಭವನೀಯ ಕಳವಿನ ಬಗ್ಗೆ ಮತ್ತು ಅವರ ಕ್ಯಾಮರಾ ಮತ್ತು ಮೈಕ್ರೊಫೋನ್ ಹ್ಯಾಕ್ ಆಗಬಹುದಾದ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡುತ್ತದೆ. ಈ ದಾಳಿಯ ಸ್ವರೂಪವು ಇಸ್ರೇಲಿ ಸೈಬರ್ ಸೆಕ್ಯುರಿಟಿ ಕಂಪೆನಿ ಎನ್‌ಎಸ್‌ಒ ಗ್ರೂಪ್ ಅಭಿವೃದ್ಧಿಪಡಿಸಿದ ಪೆಗಾಸಸ್ ಸ್ಪೈವೇರ್ ಅನ್ನು ಹೋಲುವಂಥದ್ದು. ಭಯೋತ್ಪಾದಕ ಮತ್ತು ಸಂಘಟಿತ ಅಪರಾಧ ಗುಂಪುಗಳನ್ನು ಗುರಿಯಾಗಿಸಲು ಮಾತ್ರ ಬಳಸಲಾಗಿದೆ ಎಂದು ಎನ್‌ಎಸ್‌ಒ ಹೇಳಿಕೊಳ್ಳುವ ಈ ಸ್ಪೈವೇರ್, ಮಾನವ ಹಕ್ಕುಗಳ ರಕ್ಷಕರು, ರಾಜಕಾರಣಿಗಳು ಮತ್ತು ಪತ್ರಕರ್ತರ ವಿರುದ್ಧ 2017ರಿಂದಲೂ ದುರ್ಬಳಕೆಯಾಗುತ್ತಿದೆ ಎಂಬ ಆರೋಪಗಳಿವೆ.

2021ರಲ್ಲಿ, ದಿ ವೈರ್ ಇತರ 16 ಮಾಧ್ಯಮ ಸಂಸ್ಥೆಗಳ ಸಹಯೋಗದೊಂದಿಗೆ, ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್ ಸ್ಪೈವೇರ್ ಗುರಿಯಾಗಿಸಿದೆ ಎಂದು ವಿಧಿವಿಜ್ಞಾನದ ಮೂಲಕ ಗುರುತಿಸಲ್ಪಟ್ಟ ಅನೇಕ ಭಾರತೀಯರು ಸೇರಿದಂತೆ ಹಲವರ ಹೆಸರುಗಳನ್ನು ಬಹಿರಂಗಪಡಿಸಿತ್ತು.

ಸಾರ್ವಜನಿಕ ಪ್ರಾಮುಖ್ಯತೆ ಮತ್ತು ದೇಶದ ನಾಗರಿಕರ ಮೂಲಭೂತ ಹಕ್ಕುಗಳ ದೊಡ್ಡ ಪ್ರಮಾಣದ ಉಲ್ಲಂಘನೆಯ ಆಪಾದಿತ ವ್ಯಾಪ್ತಿ ಮತ್ತು ಸ್ವರೂಪವನ್ನು ಗಣನೆಗೆ ತೆಗೆದುಕೊಂಡು ಪೆಗಾಸಸ್ ಸ್ಪೈವೇರ್ ಪ್ರಕರಣದಲ್ಲಿನ ಆರೋಪಗಳನ್ನು ಪರಿಶೀಲಿಸಲು ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ನ್ಯಾಯಮೂರ್ತಿ (ನಿವೃತ್ತ) ಆರ್.ವಿ. ರವೀಂದ್ರನ್ ನೇತೃತ್ವದ ತಜ್ಞರ ಸಮಿತಿಯನ್ನು ನೇಮಿಸುವುದಕ್ಕೆ ಈ ತನಿಖೆಯು ಪ್ರೇರಣೆಯಾಯಿತು. ಅಚ್ಚರಿಯೆಂದರೆ, ಕೇಂದ್ರ ಸರಕಾರವು ಸ್ಪೈವೇರ್ ಬಳಕೆಯಾಗಿರುವುದನ್ನು ಒಪ್ಪಿಕೊಳ್ಳಲೂ ಇಲ್ಲ, ನಿರಾಕರಿಸಲೂ ಇಲ್ಲ. ಅಂತಿಮವಾಗಿ, ಕೇಂದ್ರ ಸರಕಾರವು ಸಹಕರಿಸಲಿಲ್ಲ ಎಂಬ ಕಾರಣದಿಂದ ಸಮಿತಿಯು, ತಾನು ಪರೀಕ್ಷಿಸಿದ ಐದು ಹ್ಯಾಂಡ್‌ಸೆಟ್‌ಗಳಲ್ಲಿ ಮಾಲ್‌ವೇರ್‌ನ ನಿರ್ದಿಷ್ಟ ಇರುವಿಕೆ ಕಂಡಿದ್ದರೂ, ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್ ಸ್ಪೈವೇರ್ ಬಳಕೆಗೆ ಯಾವುದೇ ನಿರ್ಣಾಯಕ ಪುರಾವೆಗಳಿಲ್ಲ ಎಂದು ತೀರ್ಮಾನಿಸಿತ್ತು.

ಆಯಪಲ್‌ನ ಇತ್ತೀಚಿನ ಎಚ್ಚರಿಕೆಯು, ತಜ್ಞರ ಸಮಿತಿಯ ವರದಿ ಮತ್ತು ನಂತರದ ಆಗಸ್ಟ್ 25, 2022ರಂದು ಸುಪ್ರೀಂ ಕೋರ್ಟ್ ನ ಆದೇಶದ ನಂತರ ಹಿನ್ನೆಲೆಗೆ ಸರಿದಿದ್ದ ವಿಚಾರವನ್ನು ಮತ್ತೊಮ್ಮೆ ಮುಂದೆ ತಂದಿದೆ. ಆದರೆ ಸರಕಾರದ ಒಳಗೊಳ್ಳುವಿಕೆಯನ್ನು ಟೆಕ್ ಕಂಪೆನಿಯು ಸ್ಪಷ್ಟವಾಗಿ ಆರೋಪಿಸಿದ ಮೊದಲ ಎಚ್ಚರಿಕೆಯೇನೂ ಇದಲ್ಲ. ಜಗತ್ತಿನಾದ್ಯಂತ ಸ್ಪೈವೇರ್‌ಗೆ ಗುರಿಯಾಗುವವರನ್ನು ಎಚ್ಚರಿಸಲು ಫೋನ್ ತಯಾರಕರು ಈ ಹಿಂದೆಯೂ ಹಲವಾರು ಸಂದರ್ಭಗಳಲ್ಲಿ ಬಳಸಿದ್ದ ಭಾಷೆಯ ರೀತಿಯನ್ನೇ ಈ ಸಂದೇಶವೂ ಹೋಲುತ್ತದೆ.

ಹಿಂದಿನ ವರ್ಷಗಳಲ್ಲಿ ಯಾಹೂ ಮತ್ತು ಗೂಗಲ್ ಎರಡೂ ಒಂದೇ ರೀತಿಯ ಎಚ್ಚರಿಕೆಗಳನ್ನು ಕಳುಹಿಸಿದ್ದವು. ನವೆಂಬರ್ 2019ರಲ್ಲಿ, ಭಾರತದಲ್ಲಿ ಸ್ಪೈವೇರ್ ಪೆಗಾಸಸ್ ಬಳಕೆಯ ವಿಚಾರದ ಚರ್ಚೆ ಹಿನ್ನೆಲೆಗೆ ಸರಿದ ಬಳಿಕ ಕೆಲವೇ ದಿನಗಳಲ್ಲಿ ಸರಕಾರಿ ಬೆಂಬಲಿತ ಹ್ಯಾಕರ್‌ಗಳ ದಾಳಿಯ ಬಗ್ಗೆ ಬಳಕೆದಾರರಿಗೆ ಯಾಹೂ ಕಳುಹಿಸಿದ ಸಂದೇಶದ ಬಗ್ಗೆ 'ದಿ ವೈರ್' ಮೊದಲು ವರದಿ ಮಾಡಿತ್ತು. ಸಂದೇಶದಲ್ಲಿ, ಯಾಹೂ ಹೀಗೆ ಹೇಳಿತ್ತು: ''ನಿಮ್ಮ ಯಾಹೂ ಖಾತೆಯು ಸರಕಾರಿ ಬೆಂಬಲಿತ ಹ್ಯಾಕರ್‌ಗಳ ಗುರಿಯಾಗಿರಬಹುದು. ಅಂದರೆ ಅವರು ನಿಮ್ಮ ಖಾತೆಯಲ್ಲಿನ ಮಾಹಿತಿಯನ್ನು ಕದಿಯುವ ಯತ್ನದಲ್ಲಿದ್ದಾರೆ ಎಂದು ನಾವು ಭಾವಿಸುತ್ತೇವೆ.'' ಆದರೆ, ಈ ಸರಕಾರಿ ಬೆಂಬಲಿತ ಹ್ಯಾಕರ್ ಯಾರು ಅಥವಾ ಅವರು ಯಾವ ಸರಕಾರಕ್ಕಾಗಿ ಕೆಲಸ ಮಾಡುತ್ತಾರೆ ಎಂಬುದನ್ನು ಯಾಹೂ ಸ್ಪಷ್ಟಪಡಿಸಿರಲಿಲ್ಲ.

ಅದೇ ರೀತಿ, ಅದೇ ವರ್ಷ ಗೂಗಲ್ ಕೂಡ ಭಾರತ ಮೂಲದ 500 ಮಂದಿಗೆ ಅವರು ಸರಕಾರಿ ಬೆಂಬಲಿತ ಹ್ಯಾಕರ್‌ಗಳ ಪತ್ತೇದಾರಿಕೆಗೆ ಗುರಿಯಾಗಿರಬಹುದು ಎಂದು ಎಚ್ಚರಿಸಿತ್ತು.

ಆಯಪಲ್ ತನ್ನ ಈ ಎಚ್ಚರಿಕೆ ಸಂದೇಶದ ಬಳಿಕ, ಟೆಕ್ ಕಂಪೆನಿಗಳು ಆಪಾದಿತ ದಾಳಿಗಳ ಕುರಿತು ಹೆಚ್ಚುವರಿ ಮಾಹಿತಿಯನ್ನು ನೀಡದಿರಲು ಏನು ಕಾರಣ ಎಂಬುದರ ಕುರಿತು ಕೆಲವು ಸುಳಿವುಗಳನ್ನು ಒದಗಿಸಿದೆ. ''ಬೆದರಿಕೆ ಕುರಿತ ಎಚ್ಚರಿಕೆಗಳನ್ನು ನೀಡಲು ಕಾರಣವೇನು ಎಂಬುದರ ಬಗ್ಗೆ ಮಾಹಿತಿಯನ್ನು ಒದಗಿಸಲು ಸಾಧ್ಯವಿಲ್ಲ. ಏಕೆಂದರೆ ಅದು ಸರಕಾರಿ ಪ್ರಾಯೋಜಿತ ಹ್ಯಾಕರ್‌ಗಳಿಗೆ ಭವಿಷ್ಯದಲ್ಲಿ ಪತ್ತೆಹಚ್ಚುವಿಕೆಯಿಂದ ತಪ್ಪಿಸಿಕೊಳ್ಳಲು ತಮ್ಮ ವಿಧಾನವನ್ನು ಬದಲಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ'' ಎಂದು ಆಯಪಲ್ ಹೇಳಿದೆ.

ಇಂತಹ ಎಚ್ಚರಿಕೆಯನ್ನು ನೀಡುವಾಗ ಯಾವುದೇ ಟೆಕ್ ಕಂಪೆನಿ ತನ್ನ ಸೇವಾ ಬಳಕೆದಾರರನ್ನು ದೂರವಿಡುವ ದೊಡ್ಡ ಅಪಾಯದ ಸಾಧ್ಯತೆಯನ್ನೂ ತೆಗೆದುಕೊಳ್ಳುತ್ತದೆ. ಪ್ರತೀ ಬಾರಿ ಇಂತಹ ಎಚ್ಚರಿಕೆಯನ್ನು ಕಳುಹಿಸಿದಾಗ ಸಾರ್ವಜನಿಕರಲ್ಲಿ ಗೊಂದಲ, ಆತಂಕ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಸರಕಾರವು ಮೌನವಾಗಿರುತ್ತದೆ ಇಲ್ಲವೇ ಅಸ್ಪಷ್ಟ ಪದಗಳಲ್ಲಿ ಪ್ರತಿಕ್ರಿಯಿಸುತ್ತದೆ ಇಲ್ಲವೇ ಸ್ಪೈವೇರ್ ದುರ್ಬಳಕೆಯ ಆರೋಪಗಳ ಬಗ್ಗೆ ಸ್ವತಂತ್ರ ತನಿಖೆಯನ್ನು ಬಯಸುತ್ತಿರುವವರ ವಿರುದ್ಧ ಪ್ರಜಾಪ್ರಭುತ್ವವನ್ನು ಹಾಳುಮಾಡುವ ಪ್ರಯತ್ನ ಎಂದು ಆರೋಪಿಸಲು ಮುಂದಾಗುತ್ತದೆ. ಆದರೆ, ಸ್ಪೈವೇರ್‌ನ ದುರುಪಯೋಗಕ್ಕೆ ಅವಕಾಶವಿಲ್ಲ ಎಂಬಂಥ ಸ್ಪಷ್ಟ ನಿರಾಕರಣೆಗೆ ಸರಕಾರ ಮುಂದಾಗದೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ವರ್ತಿಸುತ್ತಿರುವುದರಿಂದ, ಡೇಟಾ ಕಳ್ಳತನ ಮತ್ತು ಪತ್ತೇದಾರಿಕೆಗೆ ಗುರಿಯಾಗುವವರ ಎದುರಿನ ಆತಂಕಕ್ಕೆ ಪರಿಹಾರ ಎಂಬುದು ಇರುವುದೇ ಇಲ್ಲ.

ಇತ್ತೀಚಿನ ಆಯಪಲ್ ಎಚ್ಚರಿಕೆಯ ಹಿನ್ನೆಲೆಯಲ್ಲಿ, ಕೇಂದ್ರ ಇಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ತನಿಖೆಗೆ ಆದೇಶಿಸಿದ್ದಾರೆ. ಅದೇನೇ ಇದ್ದರೂ, ಮಾಹಿತಿ ಕದಿಯುವಿಕೆ ಯತ್ನಗಳಿಗೆ ಸರಕಾರವನ್ನು ಪ್ರಶ್ನಿಸುವವರೇ ಗುರಿಯಾಗುವುದು ಮಾತ್ರ ಅನುಮಾನಗಳನ್ನು ಹಾಗೆಯೇ ಉಳಿಸುತ್ತದೆ.


(ಕೃಪೆ:thewire.in)

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries