ಒಟ್ಟಾವ : ಏರ್ ಇಂಡಿಯಾ ವಿಮಾನದಲ್ಲಿ ನವೆಂಬರ್ 19ರಂದು ಪ್ರಯಾಣಿಸುವವರಿಗೆ ಖಾಲಿಸ್ತಾನ ಬೆಂಬಲಿತ ಸಂಘಟನೆ ಬೆದರಿಕೆಯೊಡ್ಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕೆನಡಾ ಸರ್ಕಾರ, ವೈಮಾನಿಕ ಸೇವೆಗೆ ಎದುರಾಗುವ ಯಾವುದೇ ಬೆದರಿಕೆ ಮತ್ತು ಆನ್‌ಲೈನ್ ಎಚ್ಚರಿಕೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದೆ.
ಅಹಮದಾಬಾದ್‌ನಲ್ಲಿ ಇದೇ 19ರಂದು ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಆ ದಿನ ಏರ್‌ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುವವರಿಗೆ ಎಚ್ಚರಿಕೆ ನೀಡಿ ನಿಷೇಧಿತ ಸಂಘಟನೆ 'ಸಿಖ್ ಫಾರ್ ಜಸ್ಟೀಸ್ (ಎಸ್‌ಎಫ್‌ಜೆ)'ನ ಸಂಸ್ಥಾಪಕ ಗುರುಪತ್ವಂತ್ ಸಿಂಗ್ ಪನ್ನು ವಿಡಿಯೊ ಬಿಡುಗಡೆ ಮಾಡಿದ್ದ.
ಬೆದರಿಕೆಯನ್ನು ಸಂಭಾವ್ಯ ಭಯೋತ್ಪಾದನಾ ಬೆದರಿಕೆ ಎಂದು ಪರಿಗಣಿಸಲಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿರುವುದಾಗಿ ಕೆನಡಾ ಸರ್ಕಾರ ಮತ್ತು ಪೊಲೀಸ್ ಇಲಾಖೆ ಖಚಿತಪಡಿಸಿದೆ.
ತನಿಖೆ ಆರಂಭವಾಗಿರುವುದಾಗಿ ಕೆನಡಾದ ಸಾರಿಗೆ ಸಚಿವ ಪ್ಯಾಬ್ಲೊ ರೋಡ್ರಿಗಝ್ ಅವರೂ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ಆರಿಂದಮ್ ಬಾಗ್ಚಿ, 'ಇಂಥ ಭಯೋತ್ಪಾದನಾ ಬೆದರಿಕೆಗಳನ್ನು ಭಾರತ ಖಂಡಿಸುತ್ತದೆ. ಭದ್ರತೆಗೆ ಸಂಬಂಧಿಸಿದ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಿದೆ' ಎಂದು ತಿಳಿಸಿದ್ದರು.
ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಕೊಲೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮಾಡಿದ್ದ ಆರೋಪದಿಂದಾಗಿ ಭಾರತ ಮತ್ತು ಕೆನಡಾ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದೆ.