ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ವಾಯು ಮಾಲಿನ್ಯ ಅಪಾಯದ ಮಟ್ಟ ಮೀರಿದ್ದು, ಉಸಿರಾಟ ಸಂಬಂಧಿ ಕಾಯಿಲೆಗಳಿಂದ ನಿತ್ಯ ಸಾವಿರಾರು ಜನ ಉಸಿರು ಚೆಲ್ಲುತ್ತಿದ್ದಾರೆ. ವಿಶ್ವದಲ್ಲೇ ನಂ.1ವಾಯು ಮಾಲಿನ್ಯ ನಗರವೆಂಬ ಅಪಖ್ಯಾತಿ ಹೊತ್ತಿರುವ ನವದೆಹಲಿಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಇದೆ, ಹೊರಗೆ ಗಾಳಿಯಲ್ಲಿ ಉಸಿರಾಡಲು ಸಹ ಕಷ್ಟವಾಗುವಷ್ಟು ಮಾಲಿನ್ಯದ ಮಟ್ಟ ಹೆಚ್ಚುತ್ತಿದೆ.
ವಾಯು ಗುಣಮಟ್ಟ ಸೂಚ್ಯಂಕ 1 ಸಾವಿರ ದಾಟುತ್ತಿದೆ. ಇದು ಸಾಮಾನ್ಯಕ್ಕಿಂತ 100 ಪಟ್ಟು ಹೆಚ್ಚು. ಈ ವಿಷಕಾರಿ ಗಾಳಿಯು ದೆಹಲಿಯಲ್ಲಿ ವಾಸಿಸುವ ಜನರ ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತಿದೆ.
ವಾಯುಮಾಲಿನ್ಯವು ಇಲ್ಲಿ ವಾಸಿಸುವ ಜನರ ಜೀವಿತಾವಧಿಯನ್ನು ನಿರಂತರವಾಗಿ ಕಡಿಮೆ ಮಾಡುತ್ತಿದೆ. ಈ ಬಗ್ಗೆ ಪ್ರತಿದಿನ ಹೊಸ ವರದಿಗಳು ಹೊರಬರುತ್ತಿವೆ. ಭಾರತದಲ್ಲಿ ಪ್ರತಿ ವರ್ಷ ಎಷ್ಟು ಜನರು ಮಾಲಿನ್ಯದಿಂದ ಸಾಯುತ್ತಿದ್ದಾರೆ ಎಂಬ ಅಂಕಿ ಅಂಶವು ಆಘಾತಕಾರಿಯಾಗಿದೆ.
ಗಾಳಿಯು ವಿಷವಾಗುತ್ತಿದೆ: ಪ್ರತಿ ವರ್ಷ ಅಕ್ಟೋಬರ್‌ನಿಂದ ಜನವರಿವರೆಗೆ ವಾಯು ಮಾಲಿನ್ಯದ ಸಮಸ್ಯೆ ಎದುರಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ದೆಹಲಿಯ ಗಾಳಿ ವಿಷಪೂರಿತವಾಗುತ್ತಿದೆ. ಜನ ಮನೆಯಿಂದ ಹೊರಗೆ ಹೋದ ತಕ್ಷಣ ಉಸಿರಾಟದ ತೊಂದರೆ, ಕಣ್ಣುಗಳಲ್ಲಿ ಕಿರಿಕಿರಿಯನ್ನು ಅನುಭವಿಸುತ್ತಿದ್ದಾರೆ. ಅನಿವಾರ್ಯವಾಗಿ ಜನರು ತಮ್ಮ ದೇಹಕ್ಕೆ ಗಾಳಿಯ ಮೂಲಕ ವಿಷವನ್ನು ತೆಗೆದುಕೊಳ್ಳುವಂತಾಗಿದೆ.
ಸಾವಿನ ಆಘಾತಕಾರಿ ಅಂಕಿ ಅಂಶಗಳು: ಮಾಲಿನ್ಯದಿಂದ ಉಂಟಾಗುವ ಸಾವುಗಳಿಗೆ ಸಂಬಂಧಿಸಿದಂತೆ ಕಳೆದ ವರ್ಷ ಬಂದ ಲ್ಯಾನ್ಸೆಟ್ ಆಯೋಗದ ವರದಿಯಲ್ಲಿ ಆಘಾತಕಾರಿ ಎನಿಸುವ ಅಂಕಿಅಂಶಗಳನ್ನು ನೀಡಲಾಗಿದೆ. ವಿಶ್ವದಲ್ಲಿ ಪ್ರತಿ ವರ್ಷ 90 ಲಕ್ಷ ಜನ ಮಾಲಿನ್ಯದಿಂದ ಸಾಯುತ್ತಾರೆ. ಇದರಲ್ಲಿ 60 ಲಕ್ಷಕ್ಕೂ ಹೆಚ್ಚು ಸಾವುಗಳು ವಾಯು ಮಾಲಿನ್ಯದಿಂದ ಸಂಭವಿಸುತ್ತವೆ. ಭಾರತದಲ್ಲಿ ಪ್ರತಿ ವರ್ಷ 24 ಲಕ್ಷ ಜನರ ಸಾವಿಗೆ ಮಾಲಿನ್ಯ ಕಾರಣವಾಗಿದೆ. ಅಂದರೆ ಪ್ರತಿ ದಿನ ಸರಾಸರಿ 6.5 ಸಾವಿರ ಜನರು ಮಾಲಿನ್ಯದಿಂದ ಉಂಟಾಗುವ ಕಾಯಿಲೆಗಳಿಂದ ಸಾಯುತ್ತಾರೆ.
ಪ್ರಪಂಚದಾದ್ಯಂತ ಮಾಲಿನ್ಯದಿಂದ ಸಾಯುವವರ ಸಂಖ್ಯೆ ಹೆಚ್ಚಾಗಿ ಬಡತನ ಹೆಚ್ಚಿರುವ ದೇಶಗಳಲ್ಲಾಗುತ್ತಿದೆ ಎಂದು ಹೇಳಲಾಗಿದೆ. ಮಾಲಿನ್ಯದಿಂದ ಉಂಟಾಗುವ ಆರ್ಥಿಕ ನಷ್ಟವು ಕಡಿಮೆ ಆದಾಯದ ದೇಶಗಳ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.