ಗುವಾಹಟಿ: ಮಣಿಪುರದ ಸ್ಥಿತಿಗೆ ರಾಜಕೀಯ ಪರಿಹಾರದ ಅಗತ್ಯವಿದೆ ಎಂದು ಸೇನಾಪಡೆಯ ಪೂರ್ವ ಕಮಾಂಡ್ ಮುಖ್ಯಸ್ಥರು ಹೇಳಿಕೆ ನೀಡಿದ್ದಾರೆ. ಸಮುದಾಯಗಳ ನಡುವೆ ತೀವ್ರ ಸ್ವರೂಪದ ಧ‍್ರುವೀಕರಣ ನಡೆದಿರುವುದರಿಂದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಅಲ್ಲಲ್ಲಿ ಚದುರಿದಂತೆ ಹಿಂಸಾಚಾರದ ಘಟನೆಗಳು ನಡೆಯುತ್ತಿವೆ ಎಂದು ಮಂಗಳವಾರ ಪೂರ್ವ ಕಮಾಂಡ್ ನ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆದ ಲೆಫ್ಟಿನೆಂಟ್ ಜನರಲ್ ರಾಣಾ ಪ್ರತಾಪ್ ಕಲಿಟ ಗುವಾಹಟಿಯಲ್ಲಿ ಹೇಳಿದ್ದಾರೆ ಎಂದು ndtv.com ವರದಿ ಮಾಡಿದೆ.
"ಇದು ಎರಡು ಸಮುದಾಯಗಳಾದ ಕುಕಿಗಳು ಹಾಗೂ ಮೈತೈಗಳು ಮಣಿಪುರ ರಾಜ್ಯದಲ್ಲಿ ಧ‍್ರುವೀಕರಣಗೊಂಡಿರುವುದರಿಂದ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟಾಗಿದೆ. ಮಣಿಪುರ ಬಿಕ್ಕಟ್ಟಿಗೆ ರಾಜಕೀಯ ಪರಿಹಾರದ ಅಗತ್ಯವಿದೆ" ಎಂದು ಅವರು ಹೇಳಿದ್ದಾರೆ. ಲೂಟಿಯಾಗಿರುವ 4,000 ಶಸ್ತ್ರಾಸ್ತ್ರಗಳು ಈಗಲೂ ಜನರ ಬಳಿಯೇ ಉಳಿದಿದ್ದು, ಹಿಂಸಾಚಾರದ ಘಟನೆಗಳಲ್ಲಿ ಈ ಶಸ್ತ್ರಾಸ್ತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹಿರಿಯ ಸೇನಾಧಿಕಾರಿಯೂ ಆದ ಅವರು ತಿಳಿಸಿದ್ದಾರೆ.
ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಅವರ ಚಾಲಕನನ್ನು ಹತ್ಯೆಗೈದಿದ್ದರ ವಿರುದ್ಧ ಪ್ರತಿಭಟನಾರ್ಥವಾಗಿ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ 48 ಗಂಟೆಗಳ ಕಾಲ ನಡೆದ ಮುಷ್ಕರದ ಬೆನ್ನಿಗೇ ಈ ಗಮನಾರ್ಹ ಹೇಳಿಕೆ ಹೊರಬಿದ್ದಿದೆ. ಸೋಮವಾರ ನಡೆದ ಗುಂಪು ಘರ್ಷಣೆಯೊಂದರಲ್ಲಿ ಭಾರತೀಯ ಮೀಸಲು ಪಡೆ ತುಕಡಿಯ ಭದ್ರತಾ ಸಿಬ್ಬಂದಿ ಹಾಗೂ ಅವರ ಚಾಲಕನನ್ನು ಹತ್ಯೆಗೈಯ್ಯಲಾಗಿತ್ತು. ಇದರ ವಿರುದ್ಧ ಮುಷ್ಕರಕ್ಕೆ ಕರೆ ನೀಡಿದ್ದ ಆದಿವಾಸಿ ಐಕ್ಯತಾ ಸಮಿತಿಯು, ಸಂತ್ರಸ್ತರು ಕುಕಿ-ಝೋ ಸಮುದಾಯಕ್ಕೆ ಸೇರಿದ್ದು, ಕಣಿವೆ ಭಾಗದ ಬಂಡುಕೋರರು ಅವರನ್ನು ಹತ್ಯೆಗೈದಿದ್ದಾರೆ ಎಂದು ಆರೋಪಿಸಿತ್ತು.