ಕುಂಬಳೆ: ಸರೋವರ ದೇಗುಲ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯದ ದೇವರ ಮೊಸಳೆಗೆ 'ಬಬಿಯಾ' ಎಂದು ನಾಮಕರಣ ಮಾಡಲಾಗಿದ್ದು, ಈ ಹಿಂದಿನಂತೆ ನೈವೇದ್ಯ ನೀಡುವ ಬಗ್ಗೆ ಶುಕ್ರವಾರ ದೇವಸ್ಥಾನದಲ್ಲಿ ನಡೆದ ಮಕರಸಂಭ್ರಮ ಕಾರ್ಯಕ್ರಮದಲ್ಲಿ ತೀರ್ಮಾನಿಸಲಾಯಿತು.
ದೇವಸ್ಥಾನ ತಂತ್ರಿವರ್ಯ ಬ್ರಹ್ಮಶ್ರೀ ಗಣೇಶ ತಂತ್ರಿ ದೇಲಂಪಾಡಿ ಅವರ ನೇತೃತ್ವದಲ್ಲಿ ಧಾರ್ಮಿಕ ಕ್ರಿಯಾದಿಗಳು ನಡೆಯಿತು. ಶ್ರೀದೇವರಿಗೆ ನವಕ, ವಿಶೇಷ ಹಾಲಿನ ಪಾಯಸ ಸಮರ್ಪಿಸಲಾಯಿತು. ದೇವಸ್ಥಾನ ಸಭಾಂಗಣದಲ್ಲಿ ನಡೆದ ಮಕರಸಂಭ್ರಮ ಕಾರ್ಯಕ್ರಮದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪಿ. ಮಾಧವ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಹರಿದಾಸ ಶಂನಾಡಿಗ ಕುಂಬಳೆ ಅವರು 'ಸರೋವರ ಮೊಸಳೆ-ದಾರ್ಮಿಕ ನಂಬಿಕೆ'ವಿಚಾರದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಮಲಬಾರ್ ದೇವಸ್ವಂ ಬೋರ್ಡ್ ಕಾಸರಗೋಡು ವಲಯ ಅಧ್ಯಕ್ಷ ಕೊಟ್ಟರ ವಾಸುದೇವನ್, ಸದಸ್ಯ ಶಂಕರ ರೈ ಮಾಸ್ಟರ್ ಉಪಸ್ಥಿತರಿದ್ದರು. ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ರಮಾನಾಥ ಶೆಟ್ಟಿ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು. ಸತ್ಯಶಂಕರ ಭಟ್ ವಂದಿಸಿದರು.
ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮೊಸಳೆ ಬಬಿಯಾ ಶುಕ್ರವಾರ ಕೆಲವು ಭಕ್ತಾದಿಗಳಿಗೆ ದರ್ಶನ ನೀಡಿದ್ದು, ಭಕ್ತಾದಿಗಳಲ್ಲಿ ಸಂತಸಕ್ಕೆ ಕಾರಣವಾಗಿತ್ತು.