ಗುವಾಹಟಿ: ಮಣಿಪುರ ಹಿಂಸಾಚಾರವನ್ನು 'ರಾಜಕೀಯ ಸಮಸ್ಯೆ' ಎಂದು ಕರೆದಿರುವ ಪೂರ್ವ ವಿಭಾಗದ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಾಣಾ ಪ್ರತಾಪ್ ಕಲಿತಾ, ಭದ್ರತಾ ಪಡೆಗಳಿಂದ ಲೂಟಿ ಮಾಡಿದ ಸುಮಾರು 4 ಸಾವಿರ ಶಸ್ತ್ರಾಸ್ತ್ರಗಳನ್ನು ಸಾಮಾನ್ಯ ಜನರಿಂದ ವಶಪಡಿಸಿಕೊಳ್ಳದ ಹೊರತು ಹಿಂಸಾಚಾರ ಮುಂದುವರಿಯುತ್ತದೆ ಎಂದಿದ್ದಾರೆ.
ಗುವಾಹಟಿ ಪ್ರೆಸ್ ಕ್ಲಬ್ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಕಲಿತಾ, ಹಿಂಸಾಚಾರವನ್ನು ನಿಯಂತ್ರಿಸುವುದರ ಜೊತೆಗೆ ಎರಡು ಸಮುದಾಯಗಳ ನಡುವೆ ಎದ್ದಿರುವ ರಾಜಕೀಯ ಸಮಸ್ಯೆಗೆ ಶಾಂತಿಯುತ ಪರಿಹಾರವನ್ನು ಹುಡುಕಲು ಪ್ರಯತ್ನಿಸುತ್ತಿದ್ದೇವೆ ಎಂದರು.
ಆರು ತಿಂಗಳಾದರೂ ಪರಿಸ್ಥಿತಿ ಹತೋಟಿಗೆ ತರಲು ಸಾಧ್ಯವಾಗದೇ ಇರಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ರಾಜ್ಯದಲ್ಲಿ ವಾಸಿಸುತ್ತಿರುವ ಮೂರು ಸಮುದಾಯಗಳ (ಮೈತೇಯಿ, ಕುಕಿ, ನಾಗ) ನಡುವಿನ ಸಮಸ್ಯೆ ನಿನ್ನೆ ಮೊನ್ನೆಯದಲ್ಲ ಅದು ಪರಂಪರಾಗತವಾದ ಸಮಸ್ಯೆಯಾಗಿದೆ.1990ರ ದಶಕದಲ್ಲಿಯೂ ಕುಕಿ ಮತ್ತು ನಾಗಾ ಸಮಯದಾಯಗಳ ನಡುವೆ ಘರ್ಷಣೆ ನಡೆದು ಸುಮಾರು ಒಂದು ಸಾವಿರ ಜನರು ಸಾವನ್ನಪ್ಪಿದ್ದಾರೆ' ಎಂದು ಹೇಳಿದರು.
' ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಪರಿಶೀಲನೆ ನಡೆಸಲಾಗಿದ್ದು, ಮಾದಕ ವಸ್ತುಗಳ ರವಾನೆ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಕುರಿತಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ಇದಾಗ್ಯೂ ಸಾಮಾನ್ಯ ಜನರ ಕೈಯಲ್ಲೇ ಶಸ್ತ್ರಾಸ್ತ್ರಗಳು ಇರುವುದರಿಂದ ಪರಿಸ್ಥಿತಿ ಹತೋಟಿಗೆ ಬರುತ್ತಿಲ್ಲ' ಎಂದು ಹೇಳಿದರು.
'ನೆರೆಹೊರೆ ದೇಶಗಳಲ್ಲಿನ ಅಸ್ಥಿರತೆಯ ಪರಿಸ್ಥಿತಿಯು ನಮ್ಮ ದೇಶದ ಮೇಲೂ ಪರೋಕ್ಷವಾಗಿ ಪರಿಣಾಮ ಬೀರುತ್ತದೆ. ಕ್ಲೀಷ್ಟಕರವಾದ ಭೌಗೋಳಿಕ ಪರಿಸ್ಥಿತಿ, ಅಭಿವೃದ್ಧಿಯ ಕೊರತೆಯಿಂದಾಗಿ ಇಂಡೋ-ಮಯನ್ಮಾರ್ ಗಡಿಯ ಸಮಸ್ಯೆ ತೀವ್ರಗೊಳ್ಳುತ್ತಿದೆ' ಎಂದರು.