ನವದೆಹಲಿ: ಕೇಂದ್ರೀಯ ತನಿಖಾ ಸಂಸ್ಥೆಗಳು ತಮ್ಮ ತನಿಖೆಯನ್ನು ನಿಷ್ಪಕ್ಷಪಾತವಾಗಿ ಮಾಡುವಂತೆ ನೋಡಿಕೊಳ್ಳಬೇಕು ಮತ್ತು ಬೆಟ್ಟಿಂಗ್ ಆಯಪ್ ಪ್ರವರ್ತಕರಿಂದ ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಅವರು ₹ 508 ಕೋಟಿ ಹಣ ಪಡೆದಿದ್ದಾರೆಂಬ ಜಾರಿ ನಿರ್ದೇಶನಾಲಯದ (ಇ.ಡಿ) ಪತ್ರಿಕಾ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಬುಧವಾರ ಚುನಾವಣಾ ಆಯೋಗದ ಮೊರೆ ಹೋಗಿದೆ.
ಆಡಳಿತಾರೂಢ ಬಿಜೆಪಿಯು ಪ್ರತಿಪಕ್ಷಗಳ ನಾಯಕರ ವಿರುದ್ಧ ಇ.ಡಿಯನ್ನು 'ರಾಜಕೀಯ ಸಾಧನ'ವಾಗಿ ಬಳಸುವುದನ್ನು ಪ್ರವೃತ್ತಿಯಾಗಿಸಿಕೊಂಡಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಈ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಡೊಟಾಸರ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದನ್ನು ಮತ್ತು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರ ಮಗ ವೈಭವ್ ಅವರಿಗೆ ಸಮನ್ಸ್ ನೀಡಿದ್ದರ ನಿದರ್ಶನವನ್ನು ನೀಡಿದೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯ ಅಭಿಷೇಕ್ ಸಿಂಘ್ವಿ ನೇತೃತ್ವದ ನಿಯೋಗವು ಮುಖ್ಯ ಚುನಾವಣಾ ಆಯುಕ್ತರನ್ನು ಮತ್ತು ಇತರರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳೂತ್ತಿರುವ ಮತ್ತು ಆಯೋಗದ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸುತ್ತಿರುವ ಇ.ಡಿ. ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕೂಡ ಒತ್ತಾಯಿಸಿತು.
'ಕೇಂದ್ರಿಯ ತನಿಖಾ ಸಂಸ್ಥೆಗಳ ಕ್ರಮವು ಪ್ರಮುಖ ಪ್ರತಿಪಕ್ಷಗಳಿಗೆ ಕಿರುಕುಳ ನೀಡುವಂಥದ್ದಾಗಿದೆ. ಇದು ಕೇಂದ್ರ ಸರ್ಕಾರದ ಅಧಿಕಾರ ದುರ್ಬಳಕೆಯ ಗಂಭೀರ ಪ್ರಶ್ನೆಯನ್ನು ಎತ್ತುತ್ತದೆ ಅಲ್ಲದೆ ಚುನಾವಣಾ ಪ್ರಕ್ರಿಯೆ ಮೇಲೂ ಕರಿನೆರಳು ಬೀರುತ್ತದೆ' ಎಂದು ನಿಯೋಗ ಹೇಳಿದೆ.
ಜಾರಿ ನಿರ್ದೇಶನಾಲಯದ ವಶದಲ್ಲಿದ್ದ ವ್ಯಕ್ತಿಯ ಹೇಳಿಕೆ ಆಧರಿಸಿ ಮತ್ತು ಕೋರ್ಟ್ ಪರಿಶೀಲನೆ ಇಲ್ಲದೆ ಬಘೆಲ್ ಅವರ ವಿರುದ್ಧ ಆರೋಪ ಮಾಡಿರುವುದು ಇ.ಡಿಯ ಉದ್ದೇಶವನ್ನು ಪ್ರಶ್ನಿಸುವಂತೆ ಮಾಡುತ್ತದೆ ಜೊತೆಗೆ ಬಿಜೆಪಿಗೆ ರಾಜಕೀಯ ಲಾಭ ತಂದುಕೊಡುವ ಸಲುವಾಗಿ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಉದ್ದೇಶಪೂರ್ವಕವಾಗಿ ಮುಖ್ಯಮಂತ್ರಿಯವರ ಹೆಸರನ್ನು ಸೇರಿಸಲಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ.
ಬಘೇಲ್ ಅವರ ವರ್ಚಸ್ಸಿಗೆ ಧಕ್ಕೆಯುಂಟು ಮಾಡಲು ಬಿಜೆಪಿಯು ಇ.ಡಿಯನ್ನು ಉದ್ದೇಶಪೂರ್ವಕವಾಗಿ ದುರ್ಬಳಕೆ ಮಾಡಿಕೊಂಡಿದೆ. ಹಾಗಾಗಿಯೇ ಇ.ಡಿ. ಆಧಾರರಹಿತ ಪತ್ರಿಕಾ ಹೇಳಿಕೆ ನೀಡಿದೆ' ಎಂದೂ ದೂರಲಾಗಿದೆ.
ರಾಜಸ್ಥಾನದಲ್ಲಿ ಯಾವುದೇ ಸೂಕ್ತ ಪುರಾವೆಗಳು ಇಲ್ಲದಿದ್ದಾಗ್ಯೂ ದಾಳಿ ನಡೆಸಲಾಗಿದೆ. ಕಾಂಗ್ರೆಸ್ ನಾಯಕರ ರಾಜಕೀಯ ವರ್ಚಸ್ಸಿಗೆ ಧಕ್ಕೆ ತರುವ ಯಾವ ಅವಕಾಶವನ್ನೂ ಬಿಜೆಪಿ ಬಿಟ್ಟಿಲ್ಲ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಈ ಹಿಂದೆ ಕರ್ನಾಟಕ ಮತ್ತು ಪಂಜಾಬ್ ವಿಧಾನಸಭೆ ಚುನಾವಣೆಗಳ ಸಂದರ್ಭದಲ್ಲಿ ಈ ತನಿಖಾ ಸಂಸ್ಥೆಗಳು ಕೈಗೊಂಡ ಕ್ರಮಗಳ ಬಗ್ಗೆಯೂ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.