ಐಜ್ವಾಲ್: ವಿದ್ಮುನ್ಮಾನ ಮತಯಂತ್ರದ(ಇವಿಎಂ) ದೋಷದಿಂದಾಗಿ ಮಿಜೋರಾಂ ಮುಖ್ಯಮಂತ್ರಿ ಝೋರಾಮ್‌ಥಂಗಾ ತಮ್ಮ ಮತ ಚಲಾವಣೆ ಮಾಡಲು ಸಾಧ್ಯವಾಗದೆ ಹಿಂದಿರುಗಿದ್ದಾರೆ.
ಮಿಜೋ ನ್ಯಾಷನಲ್ ಫ್ರಂಟ್(ಎಂಎನ್‌ಎಫ್) ಅಧ್ಯಕ್ಷರೂ ಆಗಿರುವ ಅವರು, ಇಂದು ಬೆಳಿಗ್ಗೆ ಐಜ್ವಾಲ್ ಉತ್ತರ-II ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾನ ಕೇಂದ್ರದಲ್ಲಿ ಮತದಾನ ಮಾಡಲು ತೆರಳಿದ್ದರು.
'ಸರ್ಕಾರ ರಚಿಸಲು 21 ಸ್ಥಾನಗಳ ಅಗತ್ಯವಿದೆ. ನಾವು ಅದಕ್ಕಿಂತ ಹೆಚ್ಚು ಅಂದರೆ 25 ಅಥವಾ ಅದಕ್ಕಿಂತ ಅಧಿಕ ಸ್ಥಾನ ಗೆಲ್ಲುತ್ತೇವೆ. ನಿರಾಯಾಸವಾಗಿ ಬಹುಮತವನ್ನು ಪಡೆಯುತ್ತೇವೆ'ಎಂದು ಅವರು ಹೇಳಿದರು.
'ಕೋವಿಡ್ ಸಂದರ್ಭದಲ್ಲಿ ಇಡೀ ಜಗತ್ತು ಕಷ್ಟದಲ್ಲಿತ್ತು. ನಾವು ಅದರ ವಿರುದ್ಧ ಹೋರಾಡಿ ಆಗಲೂ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಅದರ ಆಧಾರದ ಮೇಲೆ ನಾವು ನಹುಮತ ಪಡೆಯುವ ವಿಶ್ವಾಸವಿದೆ. ಯಾವುದೇ ಕಾರಣಕ್ಕೂ ಅತಂತ್ರ ವಿಧಾನಸಭೆಯ ವಾತಾವರಣ ಸೃಷ್ಟಿ ಆಗುವುದಿಲ್ಲ' ಎಂದರು.
ಇದೇವೇಳೆ, ಎಂಎನ್‌ಎಫ್, ಎನ್‌ಡಿಎಯಲ್ಲಿ ಗುರುತಿಸಿಕೊಂಡಿದ್ದರೂ ಸಹ ರಾಜ್ಯ ಮಟ್ಟದಲ್ಲಿ ಬಿಜೆಪಿ ಜೊತೆ ನಮಗೆ ಯಾವುದೇ ಮೈತ್ರಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.