ಜೈಪುರ: ದೇಶವನ್ನು ಜಾಗತಿಕ ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡುವ ಕನಸನ್ನು ಬಿಜೆಪಿಯಿಂದ ಮಾತ್ರ ಈಡೇರಿಸಲು ಸಾಧ್ಯ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಜೈಪುರ: ದೇಶವನ್ನು ಜಾಗತಿಕ ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡುವ ಕನಸನ್ನು ಬಿಜೆಪಿಯಿಂದ ಮಾತ್ರ ಈಡೇರಿಸಲು ಸಾಧ್ಯ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಜೈಪುರದ ಝೋತ್ವಾರಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ರಾಜ್ಯವರ್ಧನ ಸಿಂಗ್ ರಾಥೋಡ್ ಪರ ನಡೆದ ಪ್ರಚಾರ ಸಭೆಯಲ್ಲಿ ಗಡ್ಕರಿ ಮಾತನಾಡಿದರು.
'ದೇಶವನ್ನು ಜಾಗತಿಕವಾಗಿ ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಬೇಕು. ಹಳ್ಳಿಗಳು, ಬಡ ಕೂಲಿಕಾರರು ಮತ್ತು ರೈತರು ಭಯ, ಹಸಿವು, ಭಯೋತ್ಪಾದನೆ ಮತ್ತು ಭ್ರಷ್ಟಾಚಾರದಿಂದ ಮುಕ್ತರಾಗಬೇಕು. ನಮ್ಮ ದೇಶವನ್ನು ವಿಶ್ವಗುರುವನ್ನಾಗಿ ಮಾಡಬೇಕು ಹಾಗೂ ನಾವು ಸ್ವಾವಲಂಬಿಗಳಾಗಬೇಕು ಈ ಎಲ್ಲಾ ಕನಸನ್ನು ಬಿಜೆಪಿಯಿಂದ ಮಾತ್ರ ನನಸಾಗಿಸಲು ಸಾಧ್ಯ' ಎಂದು ಅವರು ಹೇಳಿದ್ದಾರೆ.
'ನಾವು ನಮಗಾಗಿ ಕೆಲಸ ಮಾಡುವುದಿಲ್ಲ, ನಾವು ದೇಶಕ್ಕಾಗಿ ಮತ್ತು ಬಡವರಿಗಾಗಿ ಕೆಲಸ ಮಾಡುತ್ತೇವೆ. ಆದ್ದರಿಂದ ಈ ಬಾರಿಯ ಚುನಾವಣೆಯು ನಿಮ್ಮ ರಾಜ್ಯದ ಭವಿಷ್ಯವನ್ನು ಹಾಗೆಯೇ ಭಾರತದ ಭವಿಷ್ಯವನ್ನು ಬದಲಾಯಿಸುವ ಚುನಾವಣೆಯಾಗಿದೆ' ಎಂದು ಗಡ್ಕರಿ ತಿಳಿಸಿದ್ದಾರೆ.
'ಮುಂದಿನ ಐದು ವರ್ಷಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳು ಅಷ್ಟೇನೂ ಕಾಣವುದಿಲ್ಲ, ಬದಲಾಗಿ ಎಲೆಕ್ಟ್ರಿಕ್, ಎಥೆನಾಲ್ ಮತ್ತು ಹೈಡ್ರೋಜನ್ ವಾಹನಗಳು ಮಾತ್ರ ಕಾಣಿಸುತ್ತವೆ' ಎಂದು ಅವರು ಹೇಳಿದ್ದಾರೆ.
ರಾಜಸ್ಥಾನ ವಿಧಾನಸಭೆ ಚುನಾವಣೆಯು ನವೆಂಬರ್ 25 ರಂದು ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ.