ಒಂದು ವರ್ಷದಿಂದ ಯಾವುದೇ ವಹಿವಾಟು ಮಾಡದಿರುವ ಯುಪಿಐ ಐಡಿಗಳು ಮತ್ತು ಸಂಖ್ಯೆಗಳು ಜನವರಿಯಿಂದ ಹಣವನ್ನು ಸ್ವೀಕರಿಸಲು ತಾತ್ಕಾಲಿಕ ನಿಷೇಧವನ್ನು ಎದುರಿಸಬಹುದು.
ಒಂದು ವರ್ಷದಿಂದ ಹಣವನ್ನು ಸ್ವೀಕರಿಸದ ಅಥವಾ ಕಳುಹಿಸದ ಯುಪಿಐ ಐಡಿಗಳು ಮತ್ತು ಸಂಖ್ಯೆಗಳನ್ನು ಡಿಸೆಂಬರ್ 31 ರೊಳಗೆ ತಾತ್ಕಾಲಿಕವಾಗಿ ಫ್ರೀಜ್ ಮಾಡಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು ಆದೇಶಿಸಿದೆ.
ಬಳಕೆಯಾಗದ ಯುಪಿಐ ಐಡಿಗಳು ಮತ್ತು ಅವುಗಳ ಸಂಬಂಧಿತ ಸಂಖ್ಯೆಗಳನ್ನು ಗುರುತಿಸುವುದು ಮತ್ತು ಅವುಗಳಿಗೆ ಹಣದ ಹರಿವನ್ನು ನಿರ್ಬಂಧಿಸುವುದು ಪ್ರಸ್ತಾಪವಾಗಿದೆ. ಜನವರಿಯಿಂದ, ಈ ಕಾರಣದಿಂದ ಹಣವನ್ನು ಸ್ವೀಕರಿಸಲು ತೊಂದರೆ ಎದುರಿಸುತ್ತಿರುವವರು ತಮ್ಮ ಆಯಾ ಯುಪಿಐ ಅಪ್ಲಿಕೇಶನ್‍ನೊಂದಿಗೆ ಮರು-ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಹೀಗೆ ಮಾಡಿದರೆ ಮೊದಲಿನಂತೆ ಯುಪಿಐ ಸೇವೆ ಲಭ್ಯವಾಗಲಿದೆ.
ವ್ಯಕ್ತಿಗಳು ಪೋನ್ ಸಂಖ್ಯೆಗಳನ್ನು ಬದಲಾಯಿಸಿದಾಗ, ಅವರು ಸಾಮಾನ್ಯವಾಗಿ ಹಳೆಯ ಸಂಖ್ಯೆಯನ್ನು ಯುಪಿಐ ಐಡಿಯಿಂದ ಸಂಪರ್ಕ ಕಡಿತಗೊಳಿಸುತ್ತಾರೆ. ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ನಿಯಮಗಳ ಪ್ರಕಾರ 90 ದಿನಗಳ ನಂತರ ನಿಷ್ಕ್ರಿಯ ಸಂಖ್ಯೆಯನ್ನು ಇನ್ನೊಬ್ಬ ವ್ಯಕ್ತಿಗೆ ಹಂಚಬಹುದು. ಈ ಮೂಲಕ ಆಗಬಹುದಾದ ದುರ್ಬಳಕೆ ತಡೆಯುವುದು ಎನ್ ಪಿಸಿಐ ನಡೆಯಾಗಿದೆ.