ಕಾಸರಗೋಡು: ಸರ್ಕಾರದ ಒಂದೊಂದು ಕಡತದಲ್ಲೂ ಜನಸಾಮಾನ್ಯರ ಭವಿಷ್ಯ ಅಡಕವಾಗಿದ್ದು, ಇವುಗಳ ಬಗ್ಗೆ ನಿರ್ಲಕ್ಷ್ಯ ವಹಿಸದೆ ಜನತೆಗೆ ನ್ಯಾಯ ಒದಗಿಸಿಕೊಡಲು ಅಧಿಕಾರಿಗಳು ಬದ್ಧರಾಗಬೇಕು ಎಂಬುದಾಗಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ತಿಳಿಸಿದ್ದಾರೆ.
ಅವರು ಕೇರಳ ರಾಜ್ಯೋತ್ಸವ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಾಹಿತಿ ಕಛೇರಿ ಹಾಗೂ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಅಧಿಕೃತ ಭಾಷಾ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಒಂದಕ್ಕಿಂತ ಹೆಚ್ಚಿನ ಭಾಷೆ ಕಲಿಕೆಯಿಂದ ಬೌದ್ಧಿಕ ಮಟ್ಟ ಹೆಚ್ಚಲು ಸಾಧ್ಯ. ಆದರೆ ಮಾತೃಭಾಷೆಗೆ ಧಕ್ಕೆಯಾಗುವ ರೀತಿಯ ಯಾವುದೇ ಪ್ರಕ್ರಿಯೆ ಸಲ್ಲದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬಹುಭಾಷಾ ಸಂಗಮ ಭೂಮಿ ಕಾಸರಗೋಡಿನಲ್ಲಿ ಭಾಷಾ ಅಲ್ಪಸಂಖ್ಯಾತರನ್ನೂ ಒಟ್ಟಾಗಿ ಮುನ್ನಡೆಸಿಕೊಂಡು ಸಾಗುವುದರ ಜತೆಗೆ ಅವರ ಬೇಡಿಕೆಗಳಿಗೆ ಸಕಾಲದಲ್ಲಿ ಸ್ಪಂದಿಸುತ್ತಾ ಬರಲಾಗಿದೆ. ತುಳು ಅಕಾಡಮಿಯನ್ನೂ ಜತೆಗೆ ಸೇರಿಸಿಕೊಂಡು ಜಿಲ್ಲೆಯಲ್ಲಿ ತುಳು ಉತ್ಸವವನ್ನು ಆಯೋಜಿಸಲು ಜಿಲ್ಲಾ ಪಂಚಾಯಿತಿ ನಿರ್ಧರಿಸಿದೆ. ಜಿಲ್ಲಾಡಳಿತದ ದೂರದೃಷ್ಟಿಗನುಗುಣವಾಗಿ ಅಧಿಕಾರಿಗಳೂ ಜತೆಯಾಗಿ ಹೆಜ್ಜೆಹಾಕಲು ತಯಾರಾಗಬೇಕು ಎಂದು ತಿಳಿಸಿದರು.
ಸಹಾಯಕ ಜಿಲ್ಲಾಧಿಕಾರಿ ವಿ.ಎನ್.ದಿನೇಶ್ ಕುಮಾರ್ ಮಾತೃಭಾಷಾ ಪ್ರತಿಜ್ಞೆ ಬೋಧಿಸಿದರು.
ಈ ಸಂದರ್ಭ ಚಿತ್ರಕಲಾವಿದ, ಸಾಹಿತಿ ಕೆ.ಎ.ಗಫೂರ್ ಮತ್ತು ತುಳುಭಾಷೆ, ಜಾನಪದ ಕಲೆ ಹಾಗೂ ಸಾಂಸ್ಕøತಿಕ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಶಂಕರ ಸ್ವಾಮಿ ಕೃಪಾ ಅವರನ್ನು ರಾಜ್ಯೋತ್ಸವ ಅಂಗವಾಘಿ ಸನ್ಮಾನಿಸಲಾಯಿತು. ಕೆ.ಎ ಗಫೂರ್ ಅವರ ಬಗ್ಗೆ ಸಾಮಾಜಿಕ-ಸಾಂಸ್ಕøತಿಕ ರಂಗದ ಮುಖಂಡ ಜಿ.ಬಿ ವಲ್ಸನ್ ಹಾಗೂ ಶಂಕರ ಸ್ವಾಮಿಕೃಪಾ ಅವರ ಬಗ್ಗೆ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಪರಿಚಯ ನೀಡಿದರು.
ಹುಜೂರು ಶಿರಸ್ತೇದಾರ್ ಆರ್.ರಾಜೇಶ್, ಜಿಲ್ಲಾ ಕಾನೂನು ಅಧಿಕಾರಿ ಕೆ.ಮುಹಮ್ಮದ್ ಕುಞÂ ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್ ಸ್ವಾಗತಿಸಿ, ಗುಮಾಸ್ತ ಕೆ.ಪ್ರಸೀತಾ ವಂದಿಸಿದರು. ಗಾಂಧಿ ಜಯಂತಿ ಸಪ್ತಾಹದ ಅಂಗವಾಗಿ ಜಿಲ್ಲಾ ವಾರ್ತಾ ಕಚೇರಿ ಆಯೋಜಿಸಿದ್ದ ಕವನ ವಾಚನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಬಹುಮಾನ ವಿತರಿಸಿದರು. ಎಂ.ಮಧುಸೂದನನ್ ಸ್ವಾಗತಿಸಿದರು. ಗುಮಾಸ್ತ ಕೆ.ಪ್ರಸೀತಾ ವಂದಿಸಿದರು.