ಜಾಯ್‌ನಗರ : ದಕ್ಷಿಣ 24 ಪರಗಣ ಜಿಲ್ಲೆಯ ಜಯನಗರದಲ್ಲಿ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಸ್ಥಳೀಯ ನಾಯಕರೊಬ್ಬರನ್ನು ಸೋಮವಾರ ಬೆಳಿಗ್ಗೆ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ದಾಳಿಕೋರರಲ್ಲಿ ಒಬ್ಬಾತ ಗುಂಪು ದಾಳಿಯಲ್ಲಿ ಹತನಾಗಿದ್ದಾನೆ.
ಜಾಯ್‌ನಗರದ ಬಮುಂಗಾಚಿ ಪ್ರದೇಶದ ಟಿಎಂಸಿ ಅಧ್ಯಕ್ಷ ಸೈಫುದ್ದಿನ್ ಲಸ್ಕರ್ (47) ಹಂತಕರ ಗುಂಡೇಟಿಗೆ ಬಲಿಯಾದವರು. ಪಂಚಾಯಿತಿ ಅಧ್ಯಕ್ಷೆ, ಲಸ್ಕರ್ ಅವರ ಪತ್ನಿಯ ಬೆಂಬಲಿಗರು, ದುಷ್ಕರ್ಮಿಗಳ ಪೈಕಿ ಇಬ್ಬರು ಶಂಕಿತ ಆರೋಪಿಗಳನ್ನು ಹಿಡಿದು ಗುಂಪು ಹಲ್ಲೆ ನಡೆಸಿದ್ದಾರೆ. ಗುಂಪು ದಾಳಿಗೆ ಒಬ್ಬ ಸತ್ತಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತೊಬ್ಬನನ್ನು ರಕ್ಷಿಸಿ, ಬಂಧಿಸಿದ್ದಾರೆ.
ಬೆಳಗ್ಗಿನ ಪ್ರಾರ್ಥನೆ ಸಲ್ಲಿಸಲು ಮನೆಯಿಂದ ಹೊರಟಿದ್ದ ಲಸ್ಕರ್ ಮೇಲೆ ಅವರ ಮನೆ ಸಮೀಪವೇ ಹತ್ತಿರದಿಂದ ಗುಂಡಿನ ದಾಳಿ ನಡೆದಿದೆ. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು ಎಂದೂ ಪೊಲೀಸರು ತಿಳಿಸಿದ್ದಾರೆ.
ಈ ಹತ್ಯೆಯ ಹಿಂದೆ ಸಿಪಿಎಂ ಮತ್ತು ಬಿಜೆಪಿ ಬೆಂಬಲಿತ ಗೂಂಡಾಗಳ ಕೈವಾಡವಿದೆ ಎಂದು ಸ್ಥಳೀಯ ಶಾಸಕ ವಿಶ್ವನಾಥ್ ದಾಸ್ ಆರೋಪಿಸಿದ್ದಾರೆ.
ಮನೆಗಳಿಗೆ ಬೆಂಕಿ- ಲೂಟಿ: ಘಟನೆಯ ನಂತರ ನೆರೆಯ ದಲುವಾಖಾಲಿ ಗ್ರಾಮದಲ್ಲಿ ದುಷ್ಕರ್ಮಿಗಳು ಹಲವಾರು ಮನೆಗಳಿಗೆ ನುಗ್ಗಿ ಲೂಟಿ ಮಾಡಿ, ಬೆಂಕಿ ಹಚ್ಚಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಪೊಲೀಸರು ತಿಳಿಸಿದ್ದಾರೆ. ಘಟನೆಯ ನಂತರ ಸ್ಥಳದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
'ಸಿಪಿಎಂ ಬೆಂಬಲಿಗರಾದ ಕಾರಣಕ್ಕೆ ನಮ್ಮ ಮನೆಗಳನ್ನು ಗುರಿಯಾಗಿಸಿ ದಾಳಿ ಮಾಡಿ, ನಮ್ಮ ಮೇಲೆ ಹಲ್ಲೆ ನಡೆಸಲಾಗಿದೆ' ಎಂದು ದಲುವಾಖಾಲಿಯ ಕೆಲವು ಸಂತ್ರಸ್ತರು ಹೇಳಿದ್ದಾರೆ.
'ಪೊಲೀಸರ ಸಮ್ಮುಖದಲ್ಲಿಯೇ ತಮ್ಮ ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಸ್ಥಳಕ್ಕೆ ಬಂದ ಅಗ್ನಿಶಾಮಕ ವಾಹನಗಳನ್ನು ಬೆಂಕಿ ನಂದಿಸದಂತೆ ತಡೆಯಲಾಯಿತು' ಎಂದೂ ಅವರು ದೂರಿದ್ದಾರೆ.
ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಸುಜನ್ ಚಕ್ರವರ್ತಿ ಮಾತನಾಡಿ, 'ಈ ಘಟನೆಯು ಬೊಗ್ಟುಯಿ ಹತ್ಯಾಕಾಂಡ ನೆನಪಿಸುತ್ತದೆ. ಪ್ರತಿ ಸಾವು ದುರದೃಷ್ಟಕರ. ಸೈಫುದ್ದೀನ್ ಲಸ್ಕರ್ ಹತ್ಯೆಗೆ ಟಿಎಂಸಿಯೊಳಗಿನ ಆಂತರಿಕ ಕಲಹವೇ ಕಾರಣ. ಇದರಲ್ಲಿ ಸಿಪಿಎಂ ದೂಷಿಸುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಪೊಲೀಸರು ಲಸ್ಕರ್‌ನ ಹಂತಕರನ್ನು ಬಂಧಿಸಲು ಸಮರ್ಪಕ ತನಿಖೆ ನಡೆಸಬೇಕು. ಈ ಕೊಲೆಯ ಹಿಂದಿನ ಪಿತೂರಿಯನ್ನು ಹೊರಗೆಳೆಯಬೇಕು' ಎಂದು ಒತ್ತಾಯಿಸಿದ್ದಾರೆ.
2022ರ ಮಾರ್ಚ್‌ನಲ್ಲಿ ಬಿರ್ಭೂಮ್ ಜಿಲ್ಲೆಯ ಬೊಗ್ಟುಯಿಯಲ್ಲಿ ಸ್ಥಳೀಯ ಟಿಎಂಸಿ ನಾಯಕ ಭದು ಶೇಖ್ ಹತ್ಯೆಯ ನಂತರ ನಡೆದ ಹಿಂಸಾಚಾರದಲ್ಲಿ 10 ಜನರು ಸಾವನ್ನಪ್ಪಿದ್ದರು.