ಕಾಸರಗೋಡು: ಕಲೆಗಳು ಸಂಸ್ಕøತಿಯ ಭದ್ರ ಬುನಾದಿಯಾಗಿರುವುದಾಗಿ ಹಿರಿಯ ನೃತ್ಯ ಕಲಾವಿದೆ ಡಾ. ಪದ್ಮಾ ಸುಬ್ರಹ್ಮಣ್ಯಂ ತಿಳಿಸಿದ್ದಾರೆ. ಅವರು ಪೆರಿಯ ಆಲಂಗೋಡು ಗೋಕುಲಂ ಗೋಶಾಲೆಯಲ್ಲಿ 3ನೇ ವರ್ಷದ ದೀಪಾವಳಿ ಸಂಗೀತೋತ್ಸವ ಸಮಾರಂಭದಲ್ಲಿ ಪರಂಪರಾ ವಿದ್ಯಾಪೀಠ ವತಿಯಿಂದ ಕೊಡಮಾಡಲಾದ ನಾಟ್ಯ ಭೂಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು.
ಇದೇ ಸಂದರ್ಭ ಹಿರಿಯ ಸಂಗೀತ ಕಲಾವಿದ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕøತ ನಿವೃತ್ತ ಶಿಕ್ಷಕ ವೆಳ್ಳಿಕ್ಕೋತ್ತ್ ವಿಷ್ಣು ಭಟ್ ಅವರನ್ನು ಗುರುರತ್ನ ಪುರಸ್ಕಾರ ನೀಡಿ ಸ್ವಾಮೀಜಿ ಸನ್ಮಾನಿಸಿದರು. ಪರಂಪರಾ ವಿದ್ಯಾಪೀಠದ ಆಚಾರ್ಯ ಡಾ. ವಿಷ್ಣುಪ್ರಸಾದ್ ಹೆಬ್ಬಾರ್, ಡಾ. ನಾಗರತ್ನಾ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು.
ಹತ್ತು ದಿವಸಗಳ ಕಾಲ ನಡೆದ ಸಂಗೀತೋತ್ಸವದಲ್ಲಿ 350ಕ್ಕೂ ಹೆಚ್ಚು ಮಂದಿ ಕಲಾವಿದರು ತಮ್ಮ ಕಲಾಪ್ರತಿಭೆ ಪ್ರದರ್ಶಿಸಿದ್ದರು.
ಖ್ಯಾತ ಪಿಟೀಲು ವಾದಕ ಪದ್ಮಭೂಷಣ ಎಲ್ ಸುಬ್ರಮಣ್ಯಂ, ಖ್ಯಾತ ಹಿನ್ನೆಲೆ ಗಾಯಕಿ ಕವಿತಾ ಕೃಷ್ಣಮೂರ್ತಿ, ಹಿನ್ನಲೆ ಗಾಯಕಿ ಅನೂಪ್ ಶಂಕರ್, ನೃತ್ಯಕಲಾವಿದೆ ಪದ್ಮಭೂಷಣ ಪದ್ಮಾಸುಬ್ರಮಣ್ಯಂ, ಕರ್ನಾಟಕ ಸಂಗೀತ ದಿಗ್ಗಜರಾದ ಪಟ್ಟಾಭಿರಾಮ ಪಂಡಿತ್, ಅಭಿಷೇಕ್ ರಘುರಾಮ್, ಕುನ್ನಕುಡಿ ಬಾಲಮುರಳಿ ಕೃಷ್ಣ, ಎನ್.ಜೆ.ನಂದಿನಿ, ಘಟಂ ಮಾಂತ್ರಿಕ ಸುರೇಶ್ ವೈದ್ಯನಾಥನ್, ಬಳ್ಳಪದವು ಯೋಗೀಶ್ ಶರ್ಂ, ಮೃದಂಗ ವಿದ್ವಾನ್ ಪತ್ರಿ ಸತೀಶ್ ಕುಮಾರ್ ಸೇರಿದಂತೆ 350ಕ್ಕೂ ಹೆಚ್ಚು ಮಂದಿ ಹಿರಿಯ ಕಲಾವಿದರು ವಿವಿಧ ದಿವಸಗಳಲ್ಲಿ ನಡೆದ ಗೋಶಾಲಾ ಸಂಗೀತೋತ್ಸವದಲ್ಲಿ ಸಂಗೀತಾರ್ಚನೆ ನಡೆಸಿಕೊಟ್ಟರು.
ಅಲ್ಲದೆ ವಿವಿಧ ಮಠಾಧೀಶರು, ಧಾರ್ಮಿಕ, ಸಾಂಸ್ಕøತಿಕ, ರಾಜಕೀಯ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದೀಪಾವಳಿ ಸಂಗೀತೋತ್ಸವಕ್ಕೆ ನ. 9ರಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಚಾಲನೆ ನೀಡಿದ್ದರು.