ಬದಿಯಡ್ಕ : ತೆರವಾಗಿರುವ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡದ ಹಿನ್ನೆಲೆಯಲ್ಲಿ ಬದಿಯಡ್ಕ ಗ್ರಾಮ ಪಂಚಾಯಿತಿ ಕಚೇರಿ ಸನಿಹದ ಸಹಾಯಕ ಇಂಜಿನಿಯರ್ ಕೊಠಡಿಗೆ ಸ್ವತ: ಅಧ್ಯಕ್ಷೆ ಹಾಗೂ ಸದಸ್ಯರು ಬೀಗ ಜಡಿಯುವ ಮೂಲಕ ವಿಶಿಷ್ಟ ಪ್ರತಿಭಟನೆ ನಡೆಸಿದರು. ಪಂಚಾಯಿತಿ ಆಡಳಿತ ಸಮಿತಿ ಸದಸ್ಯರು ಪ್ರತಿಪಕ್ಷ ಸದಸ್ಯರು ಪಕ್ಷಭೇದ ಮರೆತು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಹಾಯಕ ಇಂಜಿನಿಯರ್ ಕಚೇರಿ ಉದ್ಯೋಗಸ್ಥರನ್ನು ಒಳಗೆ ಬಿಡದೆ ಪ್ರತಿಭಟನೆ ನಡೆಸಲಾಯಿತು.
ಸಹಾಯಕ ಇಂಜಿನಿಯರ್ ಸೇರಿದಂತೆ ಪಂಚಾಯಿತಿಗೆ ಕಾಯಂ ನೌಕರರ ನೇಮಕ ಮಾಡಬೇಕು, ಸರ್ಕಾರ ತಾರತಮ್ಯ ಧೋರಣೆ ಕೊನೆಗೊಳಿಸಬೇಕು, ಸ್ಥಳೀಯಾಡಳಿತ ಖಾತೆ ಸಚಿವರು ಸಮಸ್ಯೆ ಬಗ್ಗೆ ಗಮನಹರಿಸಬೇಕು, ಪಂಚಾಯಿತಿ ನಿರ್ದೇಶಕರು ಈ ಬಗ್ಗೆ ಸರ್ಕಾರಕ್ಕೆ ತಕ್ಷಣ ವರದಿ ಸಲ್ಲಿಸಬೇಕು ಮುಂತಾದ ಬೇಡಿಕೆಯೊಂದಿಗೆ ಧರಣಿ ನಡೆಸಲಾಯಿತು.
ಎಂಜಿನಿಯರ್ ಇಲ್ಲದೆ ಹಲವು ಯೋಜನೆಗಳು ಜಾರಿಯಾಗದೆ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ. ಮಧೂರು ಗ್ರಾಮ ಪಂಚಾಯಿತಿಯ ಸಹಾಯಕ ಇಂಜಿನಿಯರ್ ಅವರನ್ನು ಹೆಚ್ಚುವರಿ ಕರ್ತವ್ಯ ನೀಡಿ ಕಳುಹಿಸಿದ್ದರೂ, ಹಲವು ದಿವಸಗಳಿಂದ ಅವರೂ ರಜೆಯಲ್ಲಿದ್ದಾರೆ. ಇಬ್ಬರು ಹಿರಿಯ ಗುಮಾಸ್ತರು, ಒಬ್ಬ ಲೆಕ್ಕಾಧಿಕಾರಿ ಹಾಗೂ ವಿಇಒ ಹುದ್ದೆಗಳೂ ಖಾಲಿ ಇವೆ. ಕಳೆದ ತಿಂಗಳು ಕೈಗೊಂಡ ನಿರ್ಣಯದಂತೆ ಆಡಳಿತ ಸಮಿತಿ ಸದಸ್ಯರು ಕಾಸರಗೋಡಿನಲ್ಲಿ ಡಿಡಿಪಿ ಕಚೇರಿ ಎದುರು ಧರಣಿ ನಡೆಸಿದ್ದರೂ, ಸರ್ಕಾರ ಕಣ್ಣು ತೆರೆಯಲಿಲ್ಲ ಎಂಬುದಾಗಿ ಪಂಚಾಯಿತಿ ಉಪಾಧ್ಯಕ್ಷ ಎಂ. ಅಬ್ಬಾಸ್ ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಾ, ಪ್ರತಿಪಕ್ಷ ಮುಖಂಡ ಬಾಲಕೃಷ್ಣ ಶೆಟ್ಟಿ, ಆಡಳತ ಮತ್ತು ಪ್ರತಿಪಕ್ಷ ಬಿಜೆಪಿ ಸದಸ್ಯರು ಧರಣಿಯಲ್ಲಿ ಪಾಲ್ಗೊಂಡಿದ್ದರು. ಎಡರಂಗ ಸದಸ್ಯರು ಧರಣಿಯಲ್ಲಿ ಪಾಲ್ಗೊಂಡಿರಲಿಲ್ಲ.