ಕಾಸರಗೋಡು: ನಗರದಲ್ಲಿ ಬೀದಿ ಬದಿ ವ್ಯಾಪಾರಿ ಮಾಫಿಯಾ ನಿಯಂತ್ರಿಸಲು ಸರ್ಕಾರ ಮುಂದಾಗಬೇಕು ಎಂಬುದಾಗಿ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ರಾಜ್ಯ ಸಮಿತಿ ಕಾರ್ಯದರ್ಶಿ ಬಾಬು ಕೋಟ್ಟಯಿಲ್ ತಿಳಿಸಿದ್ದಾರೆ.
ಅವರು ಕಾಸರಗೋಡು ನಗರದಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವ ಬೀದಿ ಬದಿ ವ್ಯಾಪಾರಿಗಳಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರುವ ನಿಟ್ಟಿನಲ್ಲಿ ಮರ್ಚಂಟ್ ಅಸೋಸಿಯೇಶನ್ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ 'ಪ್ರತಿಭಟನಾ ವ್ಯಾಪಾರ' ಉದ್ಘಾಟಿಸಿ ಮಾತನಾಡಿದರು.
ಮರ್ಚಂಟ್ ಅಸೋಸಿಯೇಶನ್ ನಗರ ಘಟಕ ಅಧ್ಯಕ್ಷ ಟಿ.ಇ ಇಲ್ಯಾಸ್ ಅಧ್ಯಕ್ಷತೆ ವಹಿಸಿದ್ದರು.
ವ್ಯಾಪಾರಿಗಳಿಗೆ ಸುಗಮ ವ್ಯಾಪಾರಕ್ಕಾಗಿ,ರಸ್ತೆ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ, ನಗರ ಸೌಂದರ್ಯೀಕರಣಕ್ಕಾಗಿ ಎಂಬ ಘೋಷಣೆಯೊಂದಿಗೆ ಸೂಚನಾ ಮುಷ್ಕರ ಆಯೋಜಿಸಲಾಗಿತ್ತು. ಕಾಸರಗೋಡು ನಗರದಲ್ಲಿ ಬೀದಿ ವ್ಯಾಪಾರಿಗಳಿಂದ ಪಾದಚಾರಿಗಳಿಗೆ, ಗ್ರಾಹಕರಿಗೆ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ. ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿಸ್ಕೂಲ್ ಜಂಕ್ಷನ್ನಿಂದ ಬದರಿಯಾ ಹೋಟೆಲ್ವರೆಗಿನ ಪಾದಚಾರಿಗಳ ಕಾಲ್ನಡೆ ಹಾದಿಯನ್ನು ಸಂಪೂರ್ಣ ಬೀದಿಬದಿ ವ್ಯಾಪಾರಿಗಳು ಅತಿಕ್ರಮಿಸಿಕೊಳ್ಳುತ್ತಿದ್ದಾರೆ. ಕಾನೂನು ಪ್ರಕಾರ ಪರವಾನಗಿ ಪಡೆದು, ನಿಗದಿತ ತೆರಿಗೆ ಪಾವತಿಸಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳಿಗೆ ಇಂತಹ ಬೀದಿ ಬದಿ ವ್ಯಾಪಾರಿಗಳಿಂದ ಸಮಸ್ಯೆ ಉಂಟಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳನ್ನು ನಗರದಿಂದ ತೆರವುಗೊಳಿಸಿ, ಅವರಿಗೆ ವ್ಯಾಪಾರಕ್ಕಾಗಿ ಪ್ರತ್ಯೇಕ ಸ್ಥಳ ಕಂಡುಕೊಳ್ಳುವಂತೆ ಪ್ರತಿಭಟನಾಕಾರರು ಸಂಬಂಧಪಟ್ಟವರನ್ನು ಆಗ್ರಹಿಸಿದರು. ರಸ್ತೆ ಮತ್ತು ಪಾರ್ಕಿಂಗ್ ಏರಿಯಾಗಳನ್ನು ಅತಿಕ್ರಮಿಸಿ ಇಲ್ಲಿ ವ್ಯಾಪಾರ ನಡೆಸುತ್ತಿದ್ದರೂ, ನಗರಸಭೆ, ಪೊಲೀಸ್ ಅಥವಾ ಪಿಡಬ್ಲ್ಯೂಡಿ ಮೌನ ಪಾಲಿಸುತ್ತಿದೆ. ಅನಧಿಕೃತ ಬೀದಿಬದಿ ವ್ಯಾಪಾರಿಗಳ ವಿರುದ್ಧ ಯಾರು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆಯೂ ಅಧಿಕಾರಿಗಳಲ್ಲೇ ಸ್ಪಷ್ಟ ಧೋರಣೆಯಿಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ. ಕೆಲವು ವ್ಯಕ್ತಿಗಳು ಅನಧಿಕೃತ ಬೀದಿ ಬದಿ ವ್ಯಾಪಾರಿಗಳನ್ನು ಗುತ್ತಿಗೆ ವಹಿಸಿಕೊಂಡಂತೆ ಅವರ ಪರವಾಗಿ ವಾದ ಮಂಡಿಸುತ್ತಿದ್ದಾರೆ ಎಂದೂ ದೂರಿದರು.
ಕೆ. ಅಹಮ್ಮದ್ ಶೆರೀಪ್, ಮರ್ಚಂಟ್ ಅಸೋಸಿಯೇಶನ್ ಕಾಸರಗೋಡು ಘಟಕ ಕಾರ್ಯದರ್ಶಿ ಕೆ.ದಿನೇಶ್ ಸ್ವಾಗತಿಸಿದರು. ಕೋಶಾಧಿಕಾರಿ ನಹೀಂ ಅಂಕೋಲಾ, ಕೆ.ಜೆ ಸಜಿ, ಮಾಹಿನ್ ಕೋಲಿಕ್ಕರ, ಎ.ಎ ಅಸೀಸ್, 1ಟಇ.ಎ ಅನ್ವರ್, ಎ.ಕೆ ಮೊಯ್ದೀನ್ಕುಞÂ, ಮನೀರ್ ಎಂ.ಎಂ, ಹ್ಯಾರಿಸ್ ಸಿ.ಕೆ, ಅಜಿತ್ ಕುಮಾರ್, ಕೆ. ಶಶಿಧರನ್, ಕೆ. ಅಬ್ದುಲ್ ಲತೀಫ್, ನಹೀಂ ಅಂಕೋಲ, ಶರಶರ್ಫುದ್ದೀನ್ ಉಪಸ್ಥಿತರಿದ್ದರು. ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ವರೆಗೆ ಪ್ರತಿಭಟನಾ ವ್ಯಾಪಾರ ನಡೆಯಿತು.