ಜೆರುಸಲೇಂ: ಗಾಜಾ ನಗರದಲ್ಲಿ ಹಮಾಸ್ ಬಂಡುಕೋರರ ಸಂಸತ್ ಭವನ ಹಾಗೂ ಇತರ ಸರ್ಕಾರಿ ಕಚೇರಿಗಳನ್ನು ವಶಪಡಿಸಿಕೊಂಡಿರುವುದಾಗಿ ಇಸ್ರೇಲ್ ಸೇನೆ ಮಂಗಳವಾರ ಹೇಳಿದೆ.
ಮಿಲಿಟರಿ ಪಡೆಗಳು ಹಮಾಸ್‌ನ ಸಂಸತ್, ಸರ್ಕಾರಿ ಕಚೇರಿಗಳು, ಪೊಲೀಸ್ ಪ್ರಧಾನ ಕಚೇರಿ ಹಾಗೂ ಶಸ್ತ್ರಾಸ್ತ್ರಗಳ ತಯಾರಿ ಹಾಗೂ ಅಭಿವೃದ್ಧಿ ಮಾಡುತ್ತಿದ್ದ ಎಂಜಿನಿಯರಿಂಗ್ ಘಟಕವನ್ನು ವಶಕಪಡಿಸಿಕೊಳ್ಳಲಾಗಿದೆ ಎಂದು ಇಸ್ರೇಲ್ ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.
ಏತನ್ಮಧ್ಯೆ, ವೆಸ್ಟ್‌ಬ್ಯಾಂಕ್‌ನಲ್ಲಿ ಇಸ್ರೇಲ್ ಪಡೆಗಳ ದಾಳಿಯಿಂದಾಗಿ 8 ಮಂದಿ ಪ್ಯಾಲೆಸ್ಟೀನಿಯನ್ನರು ಸಾವಿಗೀಡಾಗಿದ್ದಾರೆ ಎಂದು ಹಮಾಸ್ ತಿಳಿಸಿದೆ.
ತುಲ್ಕರೇಮ್ ನಗರದಲ್ಲಿ ಇಸ್ರೇಲ್ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಏಳು ಮಂದಿ ಪ್ಯಾಲೆಸ್ಟೀನಿಯನ್ನರು ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಇಸ್ರೇಲಿ ಸೇನೆ ನಿಯೋಜನೆಗೊಂಡಿದೆ ಎಂದು ಸ್ಥಳದಲ್ಲಿದ್ದವರು ಮಾಹಿತಿ ನೀಡಿದ್ದಾರೆ. ಭಯೋತ್ಪಾದನಾ ಚಟುವಟಿಕೆಗಳನ್ನು ನಿಗ್ರಹಿಸಲು ಈ ಕಾರ್ಯಾಚರಣೆ ಮಾಡಿದ್ದಾಗಿ ಇಸ್ರೇಲ್ ಹೇಳಿದೆ.