ಉತ್ತರಕಾಶಿ: ಅವಶೇಷದ ಅಡಿಯಲ್ಲಿ ರಂಧ್ರ ಕೊರೆಯುವ ಬೈರಿಗೆ ಯಂತ್ರದಲ್ಲಿ ಕಾಣಿಸಿಕೊಂಡಿರುವ ತಾಂತ್ರಿಕ ಸಮಸ್ಯೆಯಿಂದಾಗಿ ಉತ್ತರಾಖಂಡ ರಾಜ್ಯದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯು ಶುಕ್ರವಾರ ಮಧ್ಯಾಹ್ನದಿಂದ ಸ್ಥಗಿತಗೊಂಡಿದೆ.
ಮತ್ತೊಂದೆಡೆ ದಿನೇ ದಿನೇ ಕಾರ್ಮಿಕರ ಆರೋಗ್ಯ ಹದಗೆಡುತ್ತಿದ್ದು, ಸಂತ್ರಸ್ತ ಕುಟುಂಬಗಳ ಸದಸ್ಯರಲ್ಲಿ ಆತಂಕ ಮಡುಗಟ್ಟಿದೆ.
ಸಹೋದರ ಗಬ್ಬರ್ ಸಿಂಗ್ ಸುರಂಗದೊಳಗೆ ಸಿಲುಕಿರುವ ಸುದ್ದಿ ತಿಳಿದು ಉತ್ತರಾಖಂಡದ ಕೋಟ್‌ದ್ವಾರದಿಂದ ಸ್ಥಳಕ್ಕೆ ಬಂದಿರುವ ಮಹಾರಾಜ್ ಸಿಂಗ್, 'ಕಾರ್ಯಾಚರಣೆ ಬಗ್ಗೆ ವಿಶ್ವಾಸ ಕಳೆದುಕೊಳ್ಳುತ್ತಿದ್ದೇನೆ' ಎಂದು ಹೇಳುವಾಗ ಅವರ ಕಣ್ಣಾಲಿಗಳಲ್ಲಿ ನೀರು ಜಿನುಗಿತು.
'ಸಹೋದರನ ಧ್ವನಿ ಕ್ಷೀಣಿಸಿದೆ. ಆತನ ಮಾತು ನನ್ನ ಕಿವಿಗೂ ಗಟ್ಟಿಯಾಗಿ ಕೇಳಿಸುತ್ತಿಲ್ಲ. ಹಾಗಾಗಿ, ಅವನೊಟ್ಟಿಗೆ ಸರಿಯಾಗಿ ಮಾತನಾಡಲು ಆಗುತ್ತಿಲ್ಲ. ಈಗ ಕಾರ್ಯಾಚರಣೆಯೂ ಸ್ಥಗಿತಗೊಂಡಿದೆ. ಇದರಿಂದ ಸುರಂಗದಲ್ಲಿ ಸಿಲುಕಿದವರಿಗೆ ಆಹಾರ ಮತ್ತು ಕುಡಿಯುವ ನೀರಿನ ಕೊರತೆಯಾಗಿದೆ. ನಾವು ತಾಳ್ಮೆ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದೇವೆ. ಇದಕ್ಕಿಂತ ಇನ್ನೇನನ್ನು ನನ್ನಿಂದ ಹೇಳಲು ಸಾಧ್ಯ?' ಎಂದು ಪ್ರಶ್ನಿಸಿದರು.
'ಸುರಂಗದೊಳಗೆ ಸಿಲುಕಿದವರನ್ನು ಸುರಕ್ಷಿತವಾಗಿ ರಕ್ಷಣೆ ಮಾಡುವುದಾಗಿ ಒಂದು ವಾರದಿಂದಲೂ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಫಲಿತಾಂಶ ಮಾತ್ರ ಶೂನ್ಯ' ಎಂದು ಹರಿದ್ವಾರದಿಂದ ಇಲ್ಲಿಗೆ ಬಂದಿರುವ ಶರ್ಮಾ ನೋವು ತೋಡಿಕೊಂಡರು. ಅವರ ಸಹೋದರ ಸುಶೀಲ್ ಶರ್ಮಾ ಸುರಂಗದೊಳಗೆ ಸಿಲುಕಿದ್ದಾರೆ.
ಕಾರ್ಯಾಚರಣೆ ಸ್ಥಗಿತ ಏಕೆ?:
ಯಂತ್ರದ ಸಹಾಯದಿಂದ ಅವಶೇಷದ ಅಡಿಯಲ್ಲಿ ರಂಧ್ರ ಕೊರೆದ ಬಳಿಕ ಕೊಳವೆಗಳನ್ನು ಒಂದರೊಳಗೊಂದು ಸೇರಿಸಲಾಗುತ್ತದೆ. ಈ ಕೊಳವೆಯ ಒಳಗಿನಿಂದ ಕಾರ್ಮಿಕರು ತೆವಳುತ್ತಾ ಹೊರಬರಬೇಕಿದೆ. ಆದರೆ, ರಂಧ್ರ ಕೊರೆಯಲು ಬಳಸಿಕೊಳ್ಳುತ್ತಿದ್ದ ಅಮೆರಿಕ ನಿರ್ಮಿತ ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದು ಕಾರ್ಯಾಚರಣೆಯು ಮತ್ತಷ್ಟು ವಿಳಂಬವಾಗಲು ಕಾರಣವಾಗಿದೆ.
ಹಾಗಾಗಿ, ಮಧ್ಯಪ್ರದೇಶದ ಇಂದೋರ್‌ನಿಂದ ಶನಿವಾರ ವಿಮಾನದ ಮೂಲಕ ಮತ್ತೊಂದು ದೊಡ್ಡ ಬೈರಿಗೆ ಯಂತ್ರದ ಮೂರು ಬಿಡಿಭಾಗಗಳನ್ನು ಸ್ಥಳಕ್ಕೆ ತರಿಸಲಾಗಿದೆ. ಇವುಗಳ ಜೋಡಣೆ ಕಾರ್ಯ ಪೂರ್ಣಗೊಂಡ ಬಳಿಕ ಮತ್ತೆ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಸ್ಥಳದಲ್ಲಿ ಬೀಡುಬಿಟ್ಟಿರುವ ಅಧಿಕಾರಿಗಳು ತಿಳಿಸಿದ್ದಾರೆ.
ಅವಶೇಷದ ಅಡಿಯಲ್ಲಿ ಸುಮಾರು 60 ಮೀಟರ್ ದೂರದಷ್ಟು ರಂಧ್ರ ಕೊರೆಯಲು ನಿರ್ಧರಿಸಲಾಗಿದೆ. ಈ ಪೈಕಿ ಶುಕ್ರವಾರ ಮಧ್ಯಾಹ್ನ 24 ಮೀಟರ್ ದೂರದಷ್ಟು ರಂಧ್ರ ಕೊರೆಯಲಾಗಿತ್ತು.
'ಐದನೇ ಕೊಳವೆ ಅಳವಡಿಸುವ ವೇಳೆ ಸುರಂಗದ ಒಳಗೆ ಬಿರುಕು ಕಾಣಿಸಿಕೊಂಡ ದೊಡ್ಡ ಸದ್ದು ಕೇಳಿಸಿತು. ಇದರಿಂದ ಕಾರ್ಯಾಚರಣೆ ನಿರತ ಕಾರ್ಮಿಕರು ಗಾಬರಿಗೊಂಡರು. ಸುರಂಗದೊಳಗೆ ಮತ್ತೆ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವ ಬಗ್ಗೆ ಪರಿಣತರು ಎಚ್ಚರಿಕೆ ನೀಡಿದ್ದರಿಂದ ಕಾರ್ಯಾಚರಣೆಯು ಸ್ಥಗಿತಗೊಂಡಿದೆ' ಎಂದು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಎನ್‌ಎಚ್‌ಐಡಿಸಿಎಲ್) ತಿಳಿಸಿದೆ.
ಸ್ಥಳಕ್ಕೆ ಕೇಂದ್ರ ತಂಡ ಭೇಟಿ:
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮಹಮೂದ್ ಅಹಮದ್, ಪ್ರಧಾನ ಮಂತ್ರಿ ಕಚೇರಿಯ ಉಪ ಕಾರ್ಯದರ್ಶಿ ಮಂಗೇಶ್ ಗಿಲ್ಡಿಯಾಲ್, ಭೂವಿಜ್ಞಾನಿ ವರುಣ್ ಅಧಿಕಾರಿ, ಎಂಜಿನಿಯರಿಂಗ್ ತಜ್ಞ ಅರ್ಮಾಂಡೋ ಕ್ಯಾಪೆಲ್ಲನ್ ಅವರನ್ನು ಒಳಗೊಂಡ ಕೇಂದ್ರ ತಂಡವು ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಯನ್ನು ಪರಿಶೀಲಿಸಿತು.
ಅವಶೇಷದ ಅಡಿಯಲ್ಲಿ ರಂಧ್ರ ಕೊರೆಯಲು ಮಧ್ಯಪ್ರದೇಶದ ಇಂದೋರ್‌ನಿಂದ ಸ್ಥಳಕ್ಕೆ ತಂದಿರುವ ಬೈರಿಗೆ ಯಂತ್ರ
ಮುಖ್ಯಮಂತ್ರಿ ಪುಷ್ಕರ್ ಧಾಮಿ ಸಭೆ
ಕಾರ್ಯಾಚರಣೆ ಸ್ಥಗಿತಗೊಂಡಿದ್ದರಿಂದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಡೆಹ್ರಾಡೂನ್‌ನ ತಮ್ಮ ಅಧಿಕೃತ ನಿವಾಸದಲ್ಲಿ ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಅವರು ದೇಶೀಯ ಹಾಗೂ ವಿದೇಶಿ ನಿರ್ಮಿತ ಯಂತ್ರಗಳ ಸಹಾಯದಿಂದ ಕಾರ್ಯಾಚರಣೆ ನಡೆಸಲಾಗುವುದು. ಪ್ರಧಾನಿ ಕಚೇರಿಯ ಮಾರ್ಗದರ್ಶನದಡಿ ರಾಜ್ಯ ಸರ್ಕಾರವು ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಶೀಘ್ರವೇ ಕಾರ್ಯಾಚರಣೆಯು ಯಶಸ್ವಿಯಾಗುವ ನಿರೀಕ್ಷೆಯಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು. 'ಕಾರ್ಮಿಕರನ್ನು ರಕ್ಷಿಸುವುದೇ ನಮ್ಮ ಆದ್ಯತೆ. ಸಂತ್ರಸ್ತ ಕುಟುಂಬದ ಸದಸ್ಯರ ಪರ ಸರ್ಕಾರ ಇದೆ' ಎಂದರು.
ಸುರಂಗದೊಳಗೆ 41 ಕಾರ್ಮಿಕರು
ಈ ಸುರಂಗವು ನವೆಂಬರ್ 12ರಂದು ಕುಸಿದು ಬಿದ್ದಿದ್ದು 40 ಕಾರ್ಮಿಕರು ಸಿಲುಕಿದ್ದಾರೆ ಎಂದು ಎನ್‌ಎಚ್‌ಐಡಿಸಿಎಲ್ ಹಾಗೂ ಸುರಂಗ ನಿರ್ಮಾಣದ ಹೊಣೆ ಹೊತ್ತಿರುವ ನವಯುಗ ಎಂಜಿನಿಯರಿಂಗ್ ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿದ್ದರು. ಬಿಹಾರದ ಮುಜಾಫರ್‌ಪುರ ಜಿಲ್ಲೆಯ ದೀಪಕ್ ಕುಮಾರ್ ಎಂಬ ಕಾರ್ಮಿಕ ಕೂಡ ಸಿಲುಕಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಹಾಗಾಗಿ ಸುರಂಗದ ಒಳಗೆ ಸಿಲುಕಿರುವ ಕಾರ್ಮಿಕರ ಸಂಖ್ಯೆ 41ಕ್ಕೆ ಏರಿದೆ.