ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿ, ಕೋಮು ಸಾಮರಸ್ಯ ಕದಡಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಅಲ್ವಿಯ ಬಲಗೈ ಬಂಟ ದಿಲಾವರ್ ಇಕ್ಬಾಲ್ ಮತ್ತು ಕುಪ್ವಾರ ನಿವಾಸಿ ಮೊಹಮ್ಮದ್ ಉಬೈದ್ ಮಲಿಕ್ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದ ಅಬ್ಬಾಸ್‌ಪುರದ ನಿವಾಸಿ ಮೊಹಮ್ಮದ್ ದಿಲಾವರ್ ಇಕ್ಬಾಲ್, ಮಾಜ್ ಖಾನ್ ಕಾಶ್ಮೀರಿ ಮತ್ತು ಆಜಾದ್ ಕಾಶ್ಮೀರಿ ಸೇರಿ ಹಲವು ಹೆಸರುಗಳೊಂದಿಗೆ ಗುರುತಿಸಿಕೊಂಡಿದ್ದಾನೆ. ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಲ್ಲಿರುವ ಯುವಕರನ್ನು ಭಯೋತ್ಪಾದಕ ಕೃತ್ಯಗಳಿಗೆ ಸೆಳೆಯಲು ಪ್ರಚೋದನಾಕಾರಿ ಭಾಷಣಗಳನ್ನು ಮಾಡಿದ್ದಾನೆ ಎಂದು ಎನ್‌ಐಎ ಹೇಳಿಕೆಯಲ್ಲಿ ತಿಳಿಸಿದೆ.
ಜಮ್ಮುವಿನ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಲಾದ ಚಾರ್ಜ್ ಶೀಟ್‌ನಲ್ಲಿ, ದಿಲಾವರ್ ಇಕ್ಬಾಲ್ ಮಸೂದ್ ಅಜರ್‌ನ ನಿಕಟ ಸಹಚರ. ಉಬೈದ್ ಮಲಿಕ್‌ನನ್ನು ಜೆಇಎಂ ಭಯೋತ್ಪಾದಕ ಸಂಘಟನೆಗೆ ಸೇರಲು ಪ್ರೇರೇಪಿಸಿದ್ದ. ಅಲ್ಲದೆ, ಕಾಶ್ಮೀರ ಕಣಿವೆಯಲ್ಲಿ ನಡೆದ ಎನ್‌ಕೌಂಟರ್‌ಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ಬಳಸಿಕೊಂಡು, ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ಯುವಕರನ್ನು ಪ್ರಚೋದಿಸುತ್ತಿದ್ದ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.