ನವದೆಹಲಿ: ಯೆಮನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಶುಶ್ರೂಷಕಿ ನಿಮಿಷಾ ಪ್ರಿಯಾ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಲು ಪ್ರಯಾಸಪಡುತ್ತಿರುವ ಅವರ ತಾಯಿಗೆ ಯಮನ್‌ಗೆ ತೆರಳಲು ಅನುಮತಿ ನೀಡುವ ವಿಷಯದಲ್ಲಿ ವಾರದೊಳಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ದೆಹಲಿ ಹೈಕೋರ್ಟ್ ಸೂಚಿಸಿದೆ.
ಭಾರತಕ್ಕೆ ಮರಳಲು ವ್ಯಕ್ತಿಯೊಬ್ಬನ ವಶದಲ್ಲಿದ್ದ ಪಾಸ್‌ಪೋರ್ಟ್ ಪಡೆಯುವ ಸಲುವಾಗಿ 2017ರಲ್ಲಿ ನಿದ್ರಾಜನಕ ಚುಚ್ಚುಮದ್ದು ನೀಡಿ ಸಾವಿಗೆ ಕಾರಣರಾಗಿದ್ದ ನಿಮಿಷಾ ಅವರಿಗೆ ಅಲ್ಲಿನ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಅಲ್ಲಿಂದ ಅವರು ಜೈಲಿನಲ್ಲಿದ್ದಾರೆ. ಅವರ ಮರಣ ದಂಡನೆ ರದ್ಧತಿ ಕೋರಿ ಸಲ್ಲಿಕೆಯಾಗಿದ್ದ ಮನವಿಯನ್ನು ಯೆಮನ್‌ನ ಸುಪ್ರೀಂಕೋರ್ಟ್ ನ. 14ರಂದು ವಜಾಗೊಳಿಸಿದೆ.
ಭಾರತಕ್ಕೆ ಮರಳಲು 2017ರಲ್ಲಿ ಯತ್ನಿಸಿದ್ದ ನಿಮಿಷಾ ಅವರು, ಪಾಸ್‌ಪೋರ್ಟ್ ಪಡೆಯಲು ತಲಾಲ್ ಅಬ್ದೊ ಮಹ್ದಿ ಅವರನ್ನು ಕೋರಿದ್ದರು. ಅವರು ನೀಡದಿದ್ದಾಗ ನಿದ್ರೆ ಬರುವ ಚುಚ್ಚುಮದ್ದು ನೀಡಿ ಪಾಸ್‌ಪೋರ್ಟ್ ಪಡೆಯುವ ಯತ್ನ ನಡೆಸಿದ್ದರು. ಆದರೆ ತಲಾಲ್ ಮೃತಪಟ್ಟಿದ್ದರು. ಈ ಆರೋಪದಡಿ ನಿಮಿಷಾ ಅವರನ್ನು ಬಂಧಿಸಲಾಗಿತ್ತು. ಅವರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರಿಗೆ ಅಲ್ಲಿನ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ನಿಮಿಷಾ ಅವರ ಪರ ವಕೀಲ ಕೆ.ಆರ್.ಸುಭಾಷಚಂದ್ರನ್ ಅವರ ಸಲಹೆ ಮೇರೆಗೆ ಕೊಲೆಗೀಡಾದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಮಾತುಕತೆಗೆ ನಿಮಿಷಾ ಅವರ ತಾಯಿ ಯೆಮನ್‌ಗೆ ತೆರಳಲು ಸಿದ್ಧವಾಗಿದ್ದರು. ಆದರೆ ಕೇಂದ್ರ ಸರ್ಕಾರ ಯೆಮನ್ ಪ್ರಯಾಣಕ್ಕೆ ಭಾರತೀಯ ನಾಗರಿಕರಿಗೆ ನಿರ್ಬಂಧ ಹೇರಿದೆ. ನಿರ್ದಿಷ್ಟ ಕಾರಣಕ್ಕಾಗಿ ಇದನ್ನು ತೆರವುಗೊಳಿಸುವಂತೆ ನಿಮಿಷಾ ಅವರ ತಾಯಿ ಹೈಕೋರ್ಟ್ ಮೊರೆ ಹೋಗಿದ್ದರು.
ಈ ಕುರಿತು ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಿದ ಸರ್ಕಾರ ಪರ ವಕೀಲ, 'ನಿರ್ದಿಷ್ಟ ಕಾರಣ ಹಾಗೂ ದಿನಗಳಿಗಾಗಿ ಯೆಮನ್‌ಗೆ ಪ್ರಯಾಣಿಸಲು ಭಾರತೀಯ ನಾಗರಿಕರಿಗೆ ಅನುಮತಿ ನೀಡಲು ಸಾಧ್ಯವಿದೆ' ಎಂದಿದ್ದಾರೆ.
'ನ್ಯಾಯಾಲಯಕ್ಕೆ ಸಲ್ಲಿಕೆಯಾದ ಮನವಿಯನ್ನೇ ಕೇಂದ್ರ ಸರ್ಕಾರ ಪರಿಗಣಿಸಿ, ವಾರದೊಳಗೆ ಪ್ರತಿಕ್ರಿಯಿಸುವಂತೆ' ನ್ಯಾ. ಸುಬ್ರಮಣ್ಯಮ್ ಪ್ರಸಾದ್ ಅವರಿದ್ದ ಪೀಠ ಕೇಂದ್ರಕ್ಕೆ ಸೂಚಿಸಿದೆ.
ಇದಕ್ಕೂ ಮೊದಲು ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಹಣ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂಬ ಕೋರಿಕೆಯನ್ನು ಹೈಕೋರ್ಟ್ ತಳ್ಳಿಹಾಕಿತ್ತು. ಆದರೆ ಮರಣದಂಡನೆಯಿಂದ ಪಾರು ಮಾಡಲು ಇರಬಹುದಾದ ಕಾನೂನಾತ್ಮಕ ಪರಿಹಾರವನ್ನು ಮುಂದುವರಿಸುವಂತೆ ಸೂಚಿಸಿತ್ತು.
ಮೃತ ಮಹ್ದಿ ಅವರು ಪ್ರಿಯಾ ಅವರನ್ನು ವರಿಸಿದ್ದಾಗಿ ಸುಳ್ಳು ದಾಖಲೆ ಸೃಷ್ಟಿಸಿದ್ದರು. ಜತೆಗೆ ಹಿಂಸೆ ಹಾಗೂ ದೌರ್ಜನ್ಯ ಎಸಗಿದ್ದರು ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.