ಉತ್ತರಕಾಶಿ: ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿಕೊಂಡಿರುವ 41 ಮಂದಿ ಕಾರ್ಮಿಕರ ಪೈಕಿ ಒಬ್ಬರಾದ ಸಬಾ ಅಹ್ಮದ್ ಅವರ ಜೊತೆ ಮಾತನಾಡುವಾಗ ಅವರ ಕುಟುಂಬದ ಸದಸ್ಯರು, 'ಹೆದರಬೇಡ, ರಕ್ಷಿಸುವ ಕೆಲಸ ನಡೆದಿದೆ' ಎಂದು ಮತ್ತೆ ಮತ್ತೆ ಹೇಳುತ್ತಿರುತ್ತಾರೆ.
ಕಾರ್ಮಿಕರಿಗೆ ಒಂದು ಪೈಪ್ ಮೂಲಕ ಮೈಕ್ ಕಳುಹಿಸಲಾಗಿದ್ದು, ಸುರಂಗದ ಹೊರಗಡೆ ಇರುವ ಕುಟುಂಬದ ಸದಸ್ಯರ ಜೊತೆ ಸಂವಹನ ನಡೆಸಲು ಇದು ಕಾರ್ಮಿಕರಿಗೆ ನೆರವಾಗುತ್ತಿದೆ.
ರಕ್ಷಣಾ ಕಾರ್ಯವು ಒಂದಲ್ಲ ಒಂದು ಅಡ್ಡಿಯ ಕಾರಣದಿಂದಾಗಿ ವಿಳಂಬಗೊಂಡಿದ್ದು, ಸಬಾ ಅವರಲ್ಲಿನ ಜೀವನೋತ್ಸಾಹ ಬತ್ತದಂತೆ ನೋಡಿಕೊಳ್ಳಲು ಅವರ ಜೊತೆ ವೈದ್ಯರು ಮತ್ತು ಮನಃಶಾಸ್ತ್ರಜ್ಞರು ಮಾತುಕತೆ ನಡೆಸುತ್ತಿರುತ್ತಾರೆ ಎಂದು ಸಹೋದರ ನಯ್ಯಾರ್ ಅಹ್ಮದ್ ಹೇಳಿದರು.
ರಕ್ಷಣಾ ಕಾರ್ಯ ನಡೆಯುತ್ತಿರುವ ಸ್ಥಳದಲ್ಲಿ ವೈದ್ಯರ ಹಾಗೂ ಮನಃಶಾಸ್ತ್ರಜ್ಞರ ಒಂದು ತಂಡ ಕೂಡ ಇದೆ. ಸುರಂಗದ ಒಳಗಡೆ ಸಿಲುಕಿರುವ ಕಾರ್ಮಿಕರ ಜೊತೆ ವೈದ್ಯರು ದಿನಕ್ಕೆರಡು ಬಾರಿ ಮಾತನಾಡುತ್ತಾರೆ. ಅಲ್ಲದೆ, ಕುಟುಂಬದ ಸದಸ್ಯರಿಗೆ ಅವರೊಂದಿಗೆ ಯಾವಾಗ ಬೇಕಿದ್ದರೂ ಮಾತನಾಡಲು ಅವಕಾಶ ಇದೆ.
'ನಾವು ಅವರಲ್ಲಿನ ಜೀವನೋತ್ಸಾಹ ಕುಗ್ಗದಂತೆ ನೋಡಿಕೊಳ್ಳುತ್ತಿರುತ್ತೇವೆ. ಕಷ್ಟಗಳು ಹಾಗೂ ಅಡ್ಡಿಗಳ ಬಗ್ಗೆ ಅವರಿಗೆ ಹೇಳುವುದಿಲ್ಲ. ಬಹಳ ಬೇಗ ನೀವು ಹೊರಬರುತ್ತೀರಿ ಎಂದು ಹೇಳುತ್ತೇವೆ. ಅವರಿಗೆ ಅಲ್ಲಿ ಅಗತ್ಯವಿರುವ ಬಹುತೇಕ ಎಲ್ಲವೂ ಸಿಗುತ್ತಿವೆ' ಎಂದು ನಯ್ಯಾರ್ ಹೇಳಿದರು. ಕಾರ್ಮಿಕರು ಸುರಂಗದಲ್ಲಿ ಸಿಲುಕಿ 15 ದಿನಗಳು ಕಳೆದಿವೆ.
'ಕಾರ್ಮಿಕರಿಗೆ ಆರಂಭದಲ್ಲಿ ನಾವು ಹಣ್ಣಿನ ರಸ ಮತ್ತು ಶಕ್ತಿವರ್ಧಕ ಪಾನೀಯ ನೀಡಿದ್ದೆವು. ಈಗ ಅವರಿಗೆ ಊಟ ಸಿಗುತ್ತಿದೆ. ಬೆಳಿಗ್ಗೆ ಅವರಿಗೆ ಮೊಟ್ಟೆ, ಹಾಲು, ಚಹಾ ಮತ್ತು ದಲಿಯಾ ಕಳುಹಿಸಲಾಗುತ್ತದೆ. ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಅವರಿಗೆ ದಾಲ್, ಅನ್ನ, ಚಪಾತಿ ಮತ್ತು ಪಲ್ಯ ನೀಡಲಾಗುತ್ತಿದೆ' ಎಂದು ಡಾ. ಪ್ರೇಮ್ ಪೋಖ್ರಿಯಾಲ್ ಹೇಳಿದರು.
ಅವರಿಗೆ ತಿನ್ನಲು ಡ್ರೈಫ್ರೂಟ್ಸ್ ಹಾಗೂ ಬಿಸ್ಕತ್ತುಗಳನ್ನು ಕೂಡ ಕೊಡಲಾಗಿದೆ ಎಂದು ತಿಳಿಸಿದರು. ಸಿನಿಮಾ ಮತ್ತು ವಿಡಿಯೊ ಗೇಮ್‌ಗಳು ಇರುವ ಸ್ಮಾರ್ಟ್‌ಫೋನ್‌ಗಳನ್ನು ಕೂಡ ಕಾರ್ಮಿಕರಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಕಾರ್ಮಿಕರು ಸಿಲುಕಿಕೊಂಡಿರುವ ಸ್ಥಳದಲ್ಲಿ ಉಷ್ಣಾಂಶವು 22ರಿಂದ 24 ಡಿಗ್ರಿ ಸೆಲ್ಸಿಯಸ್‌ನಷ್ಟು ಇದೆ. ಹೀಗಾಗಿ ಅವರಿಗೆ ಉಲ್ಲನ್ ಬಟ್ಟೆಯ ಅಗತ್ಯ ಇಲ್ಲ. ವಿದ್ಯುತ್ ಪೂರೈಕೆ ವ್ಯವಸ್ಥೆಗೆ ಧಕ್ಕೆ ಆಗಿಲ್ಲ. ಹೀಗಾಗಿ, ಕಾರ್ಮಿಕರಿಗೆ ಸುರಂಗದ ಒಳಗಡೆ ನಿರಂತರವಾಗಿ ವಿದ್ಯುತ್ ಪೂರೈಕೆ ಆಗುತ್ತಿದೆ.
ಸುರಂಗ ಕೊರೆಯುವ ಯಂತ್ರದ ಕೆಲವು ಬಿಡಿಭಾಗಗಳನ್ನು ಸೋಮವಾರ ಬೆಳಿಗ್ಗೆ ಹೊರತೆಗೆಯಲಾಗಿದೆ. ಕಾರ್ಮಿಕರನ್ನು ರಕ್ಷಿಸಲು ಚಿಕ್ಕ ಸುರಂಗವೊಂದನ್ನು ಕೊರೆಯುತ್ತಿದ್ದ ಈ ಯಂತ್ರವು ಶುಕ್ರವಾರ, ಒಳಗಡೆಯೇ ಸಿಲುಕಿಕೊಂಡಿತ್ತು. ಇದರಿಂದಾಗಿ, ರಕ್ಷಣಾ ಸುರಂಗ ಕೊರೆಯುವ ಯತ್ನವನ್ನು ಅಧಿಕಾರಿಗಳು ಸ್ಥಗಿತಗೊಳಿಸಬೇಕಾಯಿತು.