ನವದೆಹಲಿ: ಜ್ಞಾನವಾಪಿ ಪ್ರಕರಣವನ್ನು 2021ರಿಂದ ವಿಚಾರಣೆ ನಡೆಸುತ್ತಿರುವ ಏಕಸದಸ್ಯ ಪೀಠದಿಂದ ಮತ್ತೊಂದು ಪೀಠಕ್ಕೆ ವರ್ಗಾವಣೆ ಮಾಡಿದ್ದ ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಆಡಳಿತಾತ್ಮಕ ನಿರ್ಧಾರವನ್ನು ಪ್ರಶ್ನಿಸಿ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ವಾರಣಾಸಿಯಲ್ಲಿ ಜ್ಞಾನವಾಪಿ ಮಸೀದಿ ಇರುವ ದೇವಾಲಯವನ್ನು ಮರುಸ್ಥಾಪಿಸಲು ಕೋರಿ ಹೂಡಿರುವ ದಾವೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಏಕಸದಸ್ಯ ಪೀಠ ವಿಚಾರಣೆ ನಡೆಸುತ್ತಿತ್ತು. ಅದನ್ನು ಮತ್ತೊಂದು ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.
ಪ್ರಕರಣ ವರ್ಗಾವಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ, ಮಸೀದಿ ಸಮಿತಿಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹುಝೆಫಾ ಅಹ್ಮದಿ ಅವರ ವಾದವನ್ನು ಆಲಿಸಿದ ನಂತರ ಅರ್ಜಿ ವಜಾಗೊಳಿಸಿದೆ.
"ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಆದೇಶದಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ. ಹೈಕೋರ್ಟ್‌ಗಳಲ್ಲಿ ಇದು ಅತ್ಯಂತ ಪ್ರಮಾಣಿತ ಅಭ್ಯಾಸವಾಗಿದೆ. ಇದು ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರ ವ್ಯಾಪ್ತಿಯಲ್ಲಿರುತ್ತದೆ" ಎಂದು ಪೀಠ ಹೇಳಿದೆ.
ಅರ್ಜಿಯನ್ನು ವಜಾಗೊಳಿಸುವ ಮೊದಲು, ಸಿಜೆಐ ಪ್ರಕರಣದ ವರ್ಗಾವಣೆಗೆ ಕಾರಣಗಳನ್ನು ಪರಿಶೀಲಿಸಿದರು ಮತ್ತು ಅದನ್ನು ತೆರೆದ ನ್ಯಾಯಾಲಯದಲ್ಲಿ ಓದಲು ಬಯಸುವುದಿಲ್ಲ ಎಂದು ಹೇಳಿದರು.