ಪೆರ್ಲ: ಕೇಂದ್ರ ಸರ್ಕಾರದ ನಿರಂತರ ಮಧ್ಯ ಪ್ರವೇಶದಿಂದ ಅಡಕೆಯ ಧಾರಣೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡು ಬರಲು ಸಾಧ್ಯವಾಗಿರುವುದಾಗಿ ಕೇಂದ್ರ ಕೃಷಿ ಮತ್ತು ಕೃಷಿಕ ಕಲ್ಯಾಣ ಖಾತೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಅವರು ಪೆರ್ಲ ಸೇವಾ ಸಹಕಾರಿ ಬ್ಯಾಂಕಿನ ಪ್ರಾಂಗಣದಲ್ಲಿ ನಬಾರ್ಡ್ ಸಹಕಾರದೊಂದಿಗೆ ನೂತನವಾಗಿ ನಿರ್ಮಿಸಿರುವ ರಸಗೊಬ್ಬರ ದಾಸ್ತಾನು ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಅಡಕೆ ಆಮದು ಸುಂಕವನ್ನು ಕಿಲೋ ಒಂದಕ್ಕೆ 180ರಿಂದ 351ರೂ.ಗೆ ಏರಿಸುವ ಮೂಲಕ ನಮ್ಮ ಕೃಷಿಕರು ಬೆಳೆದ ಅಡಕೆಗೆ ಉತ್ತಮ ಧಾರಣೆ ಲಭಿಸುವಂತಾಗಿದೆ. ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಗೆ ಕೃಷಿಕರು ಮುಂದಾಗಬೇಕು. ಇದಕ್ಕಾಗಿ ಕೇಂದ್ರ ಸರ್ಕಾರ ಸಾಲದ ನೆರವು ನೀಡಲು ಸಿದ್ಧವಿದೆ. ವೈಯಕ್ತಿಕ ಹಾಗೂ ಸಂಘಗಳ ಮೂಲಕವೂ ಈ ಸಾಲದ ನೆರವು ಒದಗಿಸಲಾಗುವುದು. ಕೃಷಿಕರು ಒಂದೇ ಬೆಳೆಯನ್ನು ನೆಚ್ಚಿಕೊಳ್ಳದೆ, ತಮ್ಮ ಜಮೀನಿನಲ್ಲಿ ಕೋಳಿ, ಕುರಿ, ಮೀನುಸಾಕಣೆ ಜತೆಗೆ ಇತರ ಉಪ ಬೆಳೆಗಳನ್ನೂ ಬೆಳೆಸುವ ಮೂಲಕ ಭವಿಷ್ಯದಲ್ಲಿ ಬಹುಬೆಳೆಗಳತ್ತ ತಮ್ಮನ್ನು ತೊಡಗಿಸಿಕೊಳ್ಳಬೇಕು. ರಸಗೊಬ್ಬರ ಬಳಕೆ ಕ್ರಮೇಣ ಕಡಿತಗೊಳಿಸಿ, ಕೃಷಿಕರು ಜೈವಿಕ ಗೊಬ್ಬರ ಬಳಕೆಗೆ ಮುಂದಾಗಬೇಕು. ಈ ಮೂಲಕ ಹಣ ಉಳಿಕೆ ಜತೆಗೆ ಮಣ್ಣಿನ ಸಂರಕ್ಷಣೆಯೂ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿವಲಯದ ಸಂರಕ್ಷಣೆಗಾಗಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೆಲಸಗಳನ್ನು ಕೃಷಿ ಹಾಗೂ ಹೈನುಗಾರಿಕೆಗೂ ವಿಸ್ತರಿಸುವ ಬಗ್ಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಕೃಷಿಯಂತ್ರೋಪಕರಣಗಳ ಮಾರಾಟದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಸಹಕಾರಿ ಸಂಘಗಳು ಕೃಷಿಕರ ಬೆನ್ನೆಲುಬಾಗಿದ್ದು, ಕೃಷಿಕರಿಂದ ರೂಪಿತಗೊಂಡ ಈ ಸಂಘವನ್ನು ಬುಡಮೇಲುಗೊಳಿಸುವ ಯಾವುದೇ ಷಡ್ಯಂತ್ರವನ್ನು ಕೃಷಿಕರು ಒಗ್ಗಟ್ಟಿನಿಂದ ಪರಾಭವಗೊಳಿಸಬೇಕು ಎಂದು ತಿಳಿಸಿದರು.
ಸಹಕಾರಿ ಸಂಘಗಳ(ಯೋಜನೆ)ಜಂಟಿ ನಿಬಂಧಕ ಚಂದ್ರನ್ ವಿ. ಉತ್ಪಾದನಾ ಸಾಲಪತ್ರ ವಿತರಿಸಿದರು. ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ ಜೆ.ಎಸ್, ಉಪಾಧ್ಯಕ್ಷೆ ಡಾ. ಜಹನಾಸ್ ಹಂಸಾರ್, ಕಾಸರಗೋಡು ಜಿಪಂ ಸದಸ್ಯ ನಾರಾಯಣ ನಾಯ್ಕ್, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯರಾದ ಬಟ್ಟುಶೆಟ್ಟಿ ಕಾಟುಕುಕ್ಕೆ, ಅನಿಲ್‍ಕುಮಾರ್ ಎ.ಪಿ, ಬಿಜೆಪಿ ಜಿಲ್ಲಾಧ್ಯಕ್ಷ ರವೀಶ್ ತಂತ್ರಿ ಕುಂಟಾರು, ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಗಣೇಶ್ ಪಾರೆಕಟ್ಟ, ಸಹಕಾರಿ ಸಂಘಗಳ(ಯೋಜನೆ)ಜಂಟಿ ನಿಬಂಧಕ ನಾಗೇಶ್, ಸಹಕಾರಿ ಸಂಘದ ಲತಾ ಟಿಎಂ, ರವೀಂದ್ರ ಎ, ಬೈಜುರಾಜ್, ಕೇರಳ ರಆಜ್ಯ ಕೋಓಪರೇಟಿವ್‍ಬ್ಯಾಂಕ್ ಕೃಷಿ ಅಧಿಕಾರಿ ಪ್ರವೀಣ್ ಕುಮಾರ್, ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ, ಉಪಸ್ಥಿತರಿದ್ದರು. ಬ್ಯಾಂಕ್ ಅಧ್ಯಕ್ಷ ಶ್ಯಾಮಲಾ ಆರ್.ಭಟ್ ಪತ್ತಡ್ಕ ಸ್ವಾಗತಿಸಿದರು. ಬ್ಯಾಂಕ್ ಕಾರ್ಯದರ್ಶಿ ಪ್ರಭಾಕರ ಕೆ.ಪಿ ವರದಿ ವಾಚಿಸಿದರು. ಅಜಿತ್ ಹಾಗೂ ಮಧುರಾ ಎಡಮಲೆ ಕಾರ್ಯಕ್ರಮ ನಿರೂಪಿಸಿದರು. ಬ್ಯಾಂಕ್ ಉಪಾಧ್ಯಕ್ಷ ರಮೇಶ್ ಎನ್ ವಂದಿಸಿದರು.