ಕಾಸರಗೋಡು: ರಾಜ್ಯಕ್ಕೆ ಸಿಗಬೇಕಾದ ಆರ್ಥಿಕ ಸವಲತ್ತುಗಳನ್ನು ನೀಡದೆ ಕೇಂದ್ರ ಸರ್ಕಾರ ಕೇರಳಕ್ಕೆ ತಾರತಮ್ಯವೆಸಗುತ್ತಿದ್ದು, ಇದನ್ನು ಕೇರಳೀಯರೆಲ್ಲರೂ ಒಟ್ಟಾಗಿ ಎದುರಿಸಬೇಕಾದ ಅನಿವಾರ್ಯತೆ ಇದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಅವರು ಕಾಸರಗೋಡು ನಾಯನ್‍ಮೂಲೆಯಲ್ಲಿ ಚೆಂಗಳ ಪಂಚಾಯತ್ ಕ್ರೀಡಾಂಗಣದಲ್ಲಿ ನಡೆದ ಕಾಸರಗೋಡು ವಿಧಾನಸಭಾ ಕ್ಷೇತ್ರದ ನವಕೇರಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ದೇಶ ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಚರ್ಚೆಯಾಗದಂತೆ ಉದ್ದೇಶಪೂರ್ವಕವಾಗಿ ತಡೆಹಿಡಿಯಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ಇಂತಹ ಪ್ರಯತ್ನವನ್ನು ನವ ಕೇರಳ ಸಮಾವೇಶದಂತಹ ಕಾರ್ಯಕ್ರಮಗಳಿಂದ ವಿಫಲಗೊಳಿಸಲಾಗುವುದು.
ಜಾಗತೀಕರಣ ದೃಷ್ಠಿಕೋನದಲ್ಲಿ ಜಾರಿಗೆ ತಂದಿರುವ ಆರ್ಥಿಕ ನೀತಿಗೆ ವಿರುದ್ಧವಾಗಿ ಕೇಂದ್ರ ಸರ್ಕಾರ ನಡೆದುಕೊಳ್ಳುವ ಮೂಲಕ ರಾಜ್ಯ ಸರಕಾರವನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ಪ್ರಯತ್ನ ನಡೆಸುತ್ತಿದೆ. ಒಕ್ಕೂಟ ವ್ಯವಸ್ಥೆಯನ್ನು ನಾಶಪಡಿಸುತ್ತಿರುವ ಕೇಂದ್ರ ಸರ್ಕಾರದ ನೀತಿಗಳಿಂದ ಉಂಟಾದ ಆರ್ಥಿಕ ಬಿಕ್ಕಟ್ಟನ್ನು ನಾವು ಎದುರಿಸಲು ಸಿದ್ಧರಾಗಬೇಕಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಕಾಸರಗೋಡು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು ಅಧ್ಯಕ್ಷತೆ ವಹಿಸಿದ್ದರು.
ಸಚಿವರಾದ ಅಹಮ್ಮದ್ ದೇವರ್‍ಕೋವಿಲ್, ರೋಶಿ ಅಗಸ್ಟಿನ್, ಎ.ಕೆ ಶಶೀಂದ್ರನ್, ಕೆ. ಕೃಷ್ಣನ್ ಕುಟ್ಟಿ, ಆಂಟನಿ ರಾಜು, ಕೆ. ರಾಧಾಕೃಷ್ಣನ್, ಕೆ.ಎನ್ ಬಾಲಗೋಪಾಲನ್, ಪಿ.ರಾಜು, ಜೆ. ಚಿಂಚುರಾಣಿ, ವಿ.ಎನ್. ವಾಸವನ್, ಸಜಿ ಚೆರಿಯನ್, ಪಿ.ಎ. ಮಹಮ್ಮದ್ ರಿಯಾಸ್, ಪಿ. ಪ್ರಸಾದ್, ವಿ.ಶಿವನ್ ಕುಟ್ಟಿ, ಎಂ.ಬಿ ರಾಜೇಶ್, ಜಿ.ಆರ್. ಅನಿಲ್, ಆರ್. ಬಿಂದು, ವೀಣಾ ಜಾರ್ಜ್, ಎ. ಅಬ್ದುಲ್ ರಹಮಾನ್, ಶಾಸಕರಾದ ಸಿ.ಎಚ್ ಕುಞಂಬು, ಕೆ. ರಾಜಗೋಪಾಲನ್, ಇ.ಚಂದ್ರಶೇಖರನ್, ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಉಪಸ್ಥಿತರಿದ್ದರು.
ಸಂಘಟನಾ ಸಮಿತಿ ಸಂಚಾಲಕ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಕೆ. ನವೀನ್ ಬಾಬು ಸ್ವಾಗತಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ. ಸಜಿತ್ ಕುಮಾರ್ ವಂದಿಸಿದರು.