ಕಾಸರಗೋಡು: ನವಕೇರಳ ಸಮಾವೇಶದ ರಾಜ್ಯಮಟ್ಟದ ಉದ್ಘಾಟನೆ ನ. 18ರಂದು ಮಧ್ಯಾಹ್ನ 3.30ಕ್ಕೆ ಮಂಜೇಶ್ವರದ ಪೈವಳಿಕೆಯಲ್ಲಿ ನಡೆಯಲಿದೆ. ಸರ್ಕಾರಿ ಹೈಯರ್ ಸೆಕೆಮಡರಿ ಶಾಲಾ ಮೈದಾನದಲ್ಲಿ ಪ್ರತ್ಯೇಕವಾಗಿ ಸಜ್ಜುಗೊಳಿಸಲಾದ ವೇದಿಕೆಯಲ್ಲಿ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಸಮಾವೇಶಕ್ಕೆ ಚಾಲನೆ ನೀಡುವರು. ಸಚಿವ ಸಂಪುಟದ 20ಮಂದಿ ಸಚಿವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪಶು ಸಂಗೋಪನಾ ಖಾತೆ ಸಚಿವೆ ಚಿಂಜುರಾಣಿ ಹಾಗೂ ಬಂದರು ಖಾತೆ ಸಚಿವ ಅಹಮ್ಮದ್ ದೇವರ್‍ಕೋವಿಲ್ ಜಿಲ್ಲೆಯಲ್ಲಿ ಬೀಡುಬಿಟ್ಟಿದ್ದು, ಮುಖ್ಯಮಂತ್ರಿ ನ.18ರಂದು ಮಧ್ಯಾಹ್ನ ಕಾಸರಗೋಡಿಗೆ ತಲುಪಲಿದ್ದಾರೆ.
ಮುಖ್ಯಮಂತ್ರಿ, ಸಚಿವರುಗಳಿಗೆ ವಾಸ್ತವ್ಯಕ್ಕೆ ಸರ್ಕಾರಿ ಅತಿಥಿಗೃಹ, ಲೋಕೋಪಯೋಗಿ ಇಲಾಖೆಯ ವಿಶ್ರಾಂತಿಗೃಹ ಸಜ್ಜುಗೊಳಿಸಲಾಗಿದೆ. ಇನ್ನು ಅಧಿಕಾರಿಗಳಿಗೆ ತಂಗಲು ಜಿಲ್ಲೆಯ ವಿವಿಧೆಡೆ 65ಕ್ಕೂ ಹೆಚ್ಚು ಕೊಠಡಿಗಳನ್ನು ವ್ಯವಸ್ಥೆಗೊಳಿಸಲಾಗಿದೆ. ನವಕೇರಳ ಸಮಾವೇಶ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿದ್ದು, ಸಿಎಂ ಸೇರಿದಂತೆ ಸಚಿವರುಗಳಿಗೆ ತೆರಳಲು ಕೆಎಸ್ಸಾರ್ಟಿಸಿಯ ಸುಸಜ್ಜಿತ ಬಸ್ ಸೌಕರ್ಯ ಏರ್ಪಡಿಸಲಾಗಿದೆ. ಎಲ್ಲ ವ್ಯವಸ್ಥೆ ಒಳಗೊಂಡಿರುವ ಬಸ್ಸಿಗೆ ಒಂದು ಕೋಟಿಗೂ ಹೆಚ್ಚು ವ್ಯಯಿಸಲಾಗಿದ್ದು, ನ. 18ರಂದು ಮಧ್ಯಾಹ್ನ ಸಿಎಂ ಪಿಣರಾಯಿ ವಿಜಯನ್ ಬಸ್ಸಿಗೆ ಹಸಿರುನಿಶಾನಿ ತೋರಿಸುವ ಮೂಲಕ ಉದ್ಘಾಟಿಸುವರು.
ನ. 19ರಂದು ಬೆಳಗ್ಗೆ 10ಕ್ಕೆ ಕಾಸರಗೋಡು ವಿಧಾನಸಭಾ ಕ್ಷೆತ್ರದ ಸಮವೇಶ ಚೆಂಗಳ ಮಿನಿ ಕ್ರೀಡಾಂಗಣದಲ್ಲಿ ನಡೆಯಲಿರುವುದು. ಸಿಎಂ ಸಏರಿದಂತೆ ಎಲ್ಲ ಸಚಿವರೂ ಕಾಸರಗೋಡು ಜಿಲ್ಲೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕಟ್ಟುನಿಟ್ಟಿನ ನಿಗಾ ವಹಿಸಲಾಗುತ್ತಿದೆ. ಭದ್ರತೆಗಾಗಿ ಕೋಯಿಕ್ಕೋಡ್, ಕಣ್ಣೂರು ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯ ಪೊಲಿಸರನ್ನು ಕರೆಸಿಕೊಳ್ಳಲಾಗುತ್ತಿದೆ.
ಪ್ರತಿಪಕ್ಷಗಳ ಬಹಿಷ್ಕಾರ:
ನವಕೇರಳ ಸಮಾವೇಶ ಸರ್ಕಾರದ ಕಾರ್ಯಕ್ರಮವಾಗಿದ್ದರೂ, ಇದೊಂದು ಎಡರಂಗದ ಚುನಾವಣಾ ಪ್ರಚಾರದ ತಂತ್ರ ಹಾಗೂ ಆರ್ಥಿಕ ಮುಗ್ಗಟ್ಟಿನಲ್ಲಿರುವ ರಾಜ್ಯದ ಜನತೆಗೆ ಎಸಗುತ್ತಿರುವ ವಂಚನೆಯಾಘಿದೆ ಎಂಬುದಾಗಿ ಪ್ರಮುಖ ಪ್ರತಿಪಕ್ಷ ಐಕ್ಯರಂಗ ತಿಳಿಸಿದ್ದು, ಕಾರ್ಯಕ್ರಮದಿಂದ ದೂರವಿರಲು ತೀರ್ಮಾನಿಸಿದೆ. ಬಿಜೆಪಿಯೂ ಎಡರಂಗ ಸರ್ಕಾರದ ಸಮಾವೇಶವನ್ನು ಟೀಕಿಸಿದ್ದು, ಇದು ಸಿಪಿಎಂನ ಚುನಾವಣಾ ಫಂಡ್ ಸಂಗ್ರಹಿಸಲಿರುವ ತಂತ್ರವಾಗಿದೆ ಎಂದು ಆರೋಪಿಸಿದೆ.