ರಜೌರಿ : ಜಮ್ಮು ಮತ್ತು ಕಾಶ್ಮೀರ ರಜೌರಿ ಜಿಲ್ಲೆಯ ಧರ್ಮಸಾಲ್‌ನ ಬಾಜಿಮಾಲ್ ಪ್ರದೇಶದಲ್ಲಿ ಭಾರತೀಯ ಸೇನಾಪಡೆ ಎನ್ಕೌಂಟರ್ ನಡೆಸಿದ್ದು, ಎನ್ಕೌಂಟರ್ ನಲ್ಲಿ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಪ್ರಮುಖ ಭಯೋತ್ಪಾದಕ ಖಾರಿ ಸೇರಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ.
ಎನ್ಕೌಂಟರ್ ನಲ್ಲಿ ಹತ್ಯೆಯಾಗಿರುವ ಖಾರಿ ಪಾಕಿಸ್ತಾನಿ ಪ್ರಜೆಯಾಗಿದ್ದು, ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಉನ್ನತ ಶ್ರೇಣಿಯ ಭಯೋತ್ಪಾದಕ ಎಂದು ತಿಳಿದುಬಂದಿದೆ.
ಈತ ಕಾಲಾಕೋಟ್ ಅರಣ್ಯದ ಗುಹೆ ಒಂದರಲ್ಲಿ ಅಡಗಿ ಕುಳಿತಿದ್ದ. ಅತ್ಯಂತ ಚತುರ ಸ್ನೈಪರ್ ಆಗಿದ್ದ ಈತನಿಗೆ ಸಾಕಷ್ಟು ತರಬೇತಿಯೂ ಸಿಕ್ಕಿತ್ತು. ಈತನನ್ನು ರಜೌರಿ ಹಾಗೂ ಪೂಂಚ್ ನಲ್ಲಿ ಉಗ್ರ ಚಟುವಟಿಕೆಗಳ ಪುನರಾರಂಭಿಸಲುವ ಸಲುವಾಗಿಯೇ ಉಗ್ರ ಸಂಘಟನೆಗಳು ರವಾನಿಸಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಗ್ರ ಖಾರಿ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ದೇಶಗಳಲ್ಲಿ ತರಬೇತಿ ಪಡೆದಿದ್ದ. ಲಷ್ಕರ್ -ಇ-ತೊಯ್ಬಾ ಉಗ್ರ ಸಂಘಟನೆಯಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದ ಅನುಭವ ಈತನಿಗೆ ಇತ್ತು. ಕಳೆದ ಒಂದು ವರ್ಷಗಳ ಹಿಂದೆ ಈತ ಭಾರತದ ಒಳಗೆ ನುಸುಳಿದ್ದ. ಜಮ್ಮು ಮತ್ತು ಕಾಶ್ಮೀರದ ರಜೌರಿ - ಪುಂಚ್ ಭಾಗಗಳಲ್ಲಿ ಈತ ಸಕ್ರಿಯನಾಗಿದ್ದ. ಕಣಿವೆ ರಾಜ್ಯದ ದಂಗ್ರಿ ಹಾಗೂ ಕಂದ್ರಿಯಲ್ಲಿ ನಡೆದ ಭಯೋತ್ಪಾದಕ ದಾಳಿಗಳಿಗೆ ಈತನೇ ಮಾಸ್ಟರ್ ಮೈಂಡ್ ಎಂದು ತಿಳಿದುಬಂದಿದೆ.
ಉಗ್ರ ಖಾರಿಯ ಜೊತೆಗೆ ಇದ್ದ ಮತ್ತೊಬ್ಬ ಭಯೋತ್ಪಾದಕನನ್ನೂ ಇದೇ ವೇಳೆ ಭದ್ರತಾ ಪಡೆಗಳು ಹತ್ಯೆಗೈದಿವೆ. ಈತನಿಂದಲೂ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಮದ್ದು ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಈತನ ಕುರಿತಾಗಿ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರ ಬೀಳಬೇಕಿದ್ದು, ಮೃತ ಉಗ್ರನ ಗುರುತು ಪತ್ತೆ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಭದ್ರತಾ ಪಡೆಗಳು ಕಲೆ ಹಾಕುತ್ತಿವೆ.
ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಸೇನಾಪಡ ಮತ್ತು ಉಗ್ರರ ನಡುವೆ ಬುಧವಾರ ನಡೆದ ಗುಂಡಿನ ಚಕಮಕಿಯಲ್ಲಿ ಕನ್ನಡಿಗ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದು, ಮತ್ತಿಬ್ಬರು ಯೋಧರು ಗಾಯಗೊಂಡಿದ್ದರು.