ಕಾಸರಗೋಡು: ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ವಾಟ್ಸ್‍ಅಪ್ ಸಂದೇಶ ರವಾನಿಸಿ ನಾಪತ್ತೆಯಾಗಿದ್ದ ಉಳಿಯತ್ತಡ್ಕ ರಹಮತ್ ನಗರ ನಿವಾಸಿ ಹಾಗೂ ವ್ಯಾಪಾರಿ ಹಸೈನಾರ್(46) ಮೃತದೇಹ ಕಾಸರಗೋಡು ತಳಂಗರೆಯ ಹೊಸ ಮೀನುಗಾರಿಕಾ ಬಂದರು ಸನಿಹ ಪತ್ತೆಯಾಗಿದೆ. ಶುಕ್ರವಾರ ಬೆಳಗ್ಗಿನಿಂದ ಇವರು ನಾಪತ್ತೆಯಾಗಿದ್ದು, ಇವರ ಕಾರು, ಚಪ್ಪಲಿ ಹಾಗೂ ಮೊಬೈಲ್ ಚಂದ್ರಗಿರಿ ಹೊಳೆ ಸಮೀಪ ಕಂಡುಬಂದಿದ್ದು, ಹೊಳೆಗೆ ಹಾರಿದ ಬಗ್ಗೆ ಸಂಶಯದ ಹಿನ್ನೆಲೆಯಲ್ಲಿ ವ್ಯಾಪಕ ಹುಡುಕಾಟ ನಡೆಸಲಾಗಿತ್ತು. ಹಸೈನಾರ್ ಅವರಿಗಾಗಿ ಪೊಲೀಸ್, ಕರಾವಳಿ ಪೊಲೀಸ್ ಹಾಗೂ ಮುಳುಗು ತಜ್ಞರು ಹುಡುಕಾಟ ನಡೆಸುವ ಮಧ್ಯೆ ಶನಿವಾರ ಬೆಳಗ್ಗೆ ಮೃತದೇಹ ಕಂಡುಬಂದಿದೆ.
ಹಸೈನಾರ್ ಚಂದ್ರಗಿರಿ ಜಂಕ್ಷನ್ ಬಳಿ ಜ್ಯೂಸ್ ಅಂಗಡಿ ನಡೆಸುತ್ತಿದ್ದರು. ಹಸೈನಾರ್ ನಾಪತ್ತೆಯಾಗಿರುವ ಬಗ್ಗೆ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಜನರಲ್ ಆಸ್ಪತ್ರೆಯಲ್ಲಿ ಶವಮಹಜರು ನಡೆಸಲಾಯಿತು.