ಬದಿಯಡ್ಕ: ಅತ್ಯಂತ ಹುರುಪಿನಿಂದ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಇಲ್ಲಿ ಸೋಲು ಗೆಲುವು ಮುಖ್ಯ ಅಲ್ಲ. ಆದರೆ ಪ್ರತಿಯೊಬ್ಬನೂ ತಾನು ಗೆಲ್ಲಲೇಬೇಕು ಎಂದು ಕಠಿಣ ಪರಿಶ್ರಮ ಪಟ್ಟಾಗ ಪ್ರಬಲ ಪೈಪೋಟಿ ಉಂಟಾಗಲು ಸಾಧ್ಯ. ಇಂದು ಗೆಲುವನ್ನು ಪಡೆದವನು ಇನ್ನೊಂದು ದಿನ ಸೋಲಲೂ ಸಾಧ್ಯವಿದೆ. ಆದುದರಿಂದ ಯಾರನ್ನೂ ಹೀಯಾಳಿಸುವುದಾಗಲೀ, ನೋಯಿಸುವುದಾಗಲೀ ಮಾಡಬಾರದು ಎಂದು ನಿವೃತ್ತ ಸೇನಾ ಕಮಾಂಡರ್ ಶ್ಯಾಮರಾಜ್ ಇ.ವಿ. ಎಡನೀರು ಹೇಳಿದರು.
ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಜರಗಿದ ಮುಳ್ಳೇರಿಯ ಹವ್ಯಕ ಮಂಡಲದ ವಿದ್ಯಾರ್ಥಿ ವಾಹಿನಿ ಮತ್ತು ಯುವ ವಿಭಾಗದ ಮಂಡಲ ಮಟ್ಟದ ವಿದ್ಯಾರ್ಥಿ ಪ್ರತಿಭಾ ಪ್ರದರ್ಶನ ಮತ್ತು ಯುವ ಕ್ರೀಡೋತ್ಸವಕ್ಕೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು.
ಧ್ವಜಾರೋಹಣ, ಗುರುವಂದನೆ, ಪಥಸಂಚಲನ ನಡೆಯಿತು. ಮುಳ್ಳೇರಿಯ ಮಂಡಲ ಅಧ್ಯಕ್ಷ ಕೃಷ್ಣಮೂರ್ತಿ ಮಾಡಾವು, ಕಾರ್ಯದರ್ಶಿ ಸುಬ್ರಹ್ಮಣ್ಯ ಕೆರೆಮೂಲೆ, ಉಪಾಧ್ಯಕ್ಷ ನಾರಾಯಣ ಮೂರ್ತಿ ಚೆಯ್ಯಂಡಾಣೆ, ಪ್ರಮುಖರಾದ ಜಯದೇವ ಖಂಡಿಗೆ, ಈಶ್ವರಿ ಬೇರ್ಕಡವು, ಡಾ. ವೈ..ವಿ.ಕೃಷ್ಣಮೂರ್ತಿ, ಕೇಶವ ಪ್ರಕಾಶ ಮುಣ್ಚಿಕ್ಕಾನ, ಡಾ.ಶ್ರೀಶಕುಮಾರ ಪಂಜಿತ್ತಡ್ಕ, ವಿವಿಧ ವಲಯಗಳ ಪದಾಧಿಕಾರಿಗಳು, ಗುರಿಕ್ಕಾರರು ಪಾಲ್ಗೊಂಡಿದ್ದರು. ಮಂಡಲ ವಿದ್ಯಾರ್ಥಿವಾಹಿನಿಯ ಶ್ಯಾಮಪ್ರಸಾದ ಕುಳಮರ್ವ ಸ್ವಾಗತಿಸಿದರು. ಬಾಲಕೃಷ್ಣ ಶರ್ಮ ಅನಂತಪುರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗುರುಮೂರ್ತಿ ನಾಯ್ಕಾಪು ನಿರೂಪಿಸಿದರು. ಎಣ್ಮಕಜೆ, ಪಳ್ಳತ್ತಡ್ಕ, ನೀರ್ಚಾಲು, ಪೆರಡಾಲ, ಗುಂಪೆ, ಕುಂಬಳೆ, ಕಾಸರಗೋಡು, ಚಂದ್ರಗಿರಿ, ಈಶ್ವರಮಂಗಲ, ಗುತ್ತಿಗಾರು, ಸುಳ್ಯ, ಕೊಡಗು ವಲಯಗಳಿಂದ ಸ್ಪರ್ಧಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
`ಬೆನ್ನು ಹುರಿ ಹಾಗೂ ಕಾಲುಗಳಿಗೆ ಬಲವನ್ನು ಕಳೆದುಕೊಂಡಿರುವ ಕಮಾಂಡರ್ ಶ್ಯಾಮರಾಜ್ ಅವರು ಕ್ರೀಡಾ ಮೆರವಣಿಗೆಯಲ್ಲಿ ವೀಲ್ ಚೇರ್‍ನಲ್ಲೇ ಸಾಗಿ ಗಮನಸೆಳೆದರು.