ನವದೆಹಲಿ: ಚುನಾವಣೆಗೆ ಎಂಟು ದಿನಗಳು ಬಾಕಿ ಇರುವಾಗ ರಾಜಸ್ಥಾನದಲ್ಲಿ ರಾಹುಲ್ ಗಾಂಧಿ ಅವರು ಅಂತಿಮವಾಗಿ ನಾಲ್ಕು ದಿನಗಳು ಪ್ರಚಾರ ಕೈಗೊಳ್ಳಲಿದ್ದಾರೆ. ಚುನಾವಣೆ ಘೋಷಣೆ ಬಳಿಕ ಇದೇ ಮೊದಲ ಬಾರಿಗೆ ಅವರು ಈ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು ಇದೇ 16, 19,21 ಮತ್ತು 22ರಂದು ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದೇ 25ರಂದು ರಾಜಸ್ಥಾನದಲ್ಲಿ ಚುನಾವಣೆ ನಡೆಯಲಿದೆ. ಪ್ರಚಾರಕ್ಕೆ ಇದೇ 23 ಕಡೆಯ ದಿನ.
ಚುನಾವಣೆ ಘೋಷಣೆಯಾಗಿ ತಿಂಗಳಾದರೂ ರಾಹುಲ್ ರಾಜ್ಯಕ್ಕೆ ಭೇಟಿ ನೀಡದೇ ಇದ್ದುದ್ದು ಅವರು ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಪರ ಪ್ರಚಾರ ಕೈಗೊಳ್ಳುವರೋ ಇಲ್ಲವೋ ಎಂಬ ಅನುಮಾನ ಹುಟ್ಟಿ ಹಾಕಿತ್ತು. ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡುವ ಪಕ್ಷದ ಹೈಕಮಾಂಡ್‌ನ ಆಲೋಚನೆಯನ್ನು ಗೆಹಲೋತ್ ಅವರು ನಿಷ್ಫಲಗೊಳಿಸಿದ್ದರು.
ಕೇವಲ ನಾಲ್ಕು ದಿನಗಳು ಮಾತ್ರ ಪ್ರಚಾರ ಕೈಗೊಳ್ಳಲಿದ್ದರೂ ರಾಹುಲ್ ಅವರು ಜೈಪುರದಲ್ಲಿ ಇನ್ನೂ ಕೆಲವು ದಿನಗಳ ಇರಲಿದ್ದಾರೆ. ದೆಹಲಿಯಲ್ಲಿ ಹೆಚ್ಚಿರುವ ವಾಯು ಮಾಲಿನ್ಯದ ಕಾರಣ ರಾಹುಲ್ ಅವರ ತಾಯಿ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಜೈಪುರದಲ್ಲಿ ಕೆಲ ಕಾಲ ತಂಗಲಿದ್ದಾರೆ.
'ಸೋನಿಯಾ ಅವರು ಕೆಲ ದಿನಗಳು ಜೈಪುರದಲ್ಲಿ ಇರಲಿದ್ದಾರೆ. ಇದು ವೈಯಕ್ತಿಕ ಭೇಟಿ ಆಗಿರುತ್ತದೆ. ರಾಹುಲ್ ಅವರು ಜೈಪುರದಲ್ಲಿದ್ದು ಛತ್ತೀಸಗಢದಲ್ಲಿ ಮತ್ತು ರಾಜಸ್ಥಾನದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ' ಎಂದು ಕಾಂಗ್ರಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಮಂಗಳವಾರ ರಾತ್ರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಹುಲ್ ಅವರಲ್ಲದೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಲಾ ಮೂರು ದಿನಗಳು ರ್‍ಯಾಲಿಗಳಲ್ಲಿ ಪಾಲ್ಗೊಳ್ಳುವರು.
ಅಕ್ಟೋಬರ್ 9ರಂದು ಚುನಾವಣೆ ಘೋಷಣೆಯಾದ ಬಳಿಕ ರಾಹುಲ್ ಅವರು ತೆಲಂಗಾಣದಲ್ಲಿ ಕನಿಷ್ಠ ಐದು ದಿನಗಳಿದ್ದು 14 ರೋಡ್‌ಶೋಗಳು, ಸಾರ್ವಜನಿಕ ಸಭೆಗಳು ಮತ್ತು ಇತರ ಸಭೆಗಳಲ್ಲಿ ಭಾಗವಹಿಸಿದ್ದಾರೆ. ತೆಲಂಗಾಣದಲ್ಲಿ ಇದೇ 30ರಂದು ಚುನಾವಣೆ ನಡೆಯಲಿದೆ.
ರಾಜಸ್ಥಾನದಲ್ಲಿ ರಾಹುಲ್ ಅವರ ಗೈರು ಕುರಿತಂತೆ ವಿವಾದಗಳು ಏಳುತ್ತಿದ್ದಂತೆಯೇ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು, 'ಕೆಲವು ಮಾಧ್ಯಮಗಳು ಕಾಂಗ್ರೆಸ್‌ನ ಉನ್ನತ ನಾಯಕರ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿವೆ' ಎಂದು ಆರೋಪಿಸಿದರು.
'ಪ್ರಧಾನಿ ಮೋದಿ ಅವರು ಮಿಜೋರಾಂನಲ್ಲಿ ಪ್ರಚಾರ ಕೈಗೊಳ್ಳದಿರುವ ಬಗ್ಗೆ ಸಂಪೂರ್ಣ ಮೌನವಿದೆ. ಆದರೆ ನಮ್ಮ ವಿರುದ್ಧ ಅಪ ಪ್ರಚಾರ ಮಾಡಲಾಗುತ್ತಿದೆ. ರಾಜಸ್ಥಾನದ ಬಗೆಗಿನ ನಮ್ಮ ಬದ್ಧತೆಯನ್ನು ಪ್ರಶ್ನಿಸುವುದು ಸರಿಯಲ್ಲ' ಎಂದು ಅವರು ಎಕ್ಸ್‌ನಲ್ಲಿ ಭಾನುವಾರ ಪೋಸ್ಟ್ ಮಾಡಿದ್ದಾರೆ.
ಭಾರತ್ ಜೋಡೊ ಯಾತ್ರೆ ವೇಳೆ ರಾಹುಲ್ ಅವರು 18 ದಿನಗಳು ರಾಜಸ್ಥಾನದಲ್ಲಿ ನಡೆದಾಡಿದ್ದರು ಎಂದೂ ಅವರು ನೆನಪಿಸಿಕೊಂಡಿದ್ದಾರೆ.
'ಮುಂಬರುವ ಚುನಾವಣೆಗೆ ಪಕ್ಷ ನೀಡಿರುವ ಗ್ಯಾರಂಟಿಗಳು, ರಾಹುಲ್ ಅವರು ರಾಜಸ್ಥಾನದ ಬಡವರು, ಯುವಜನತೆ ಮತ್ತು ದುರ್ಬಲ ವರ್ಗದ ಜನರೊಂದಿಗೆ ನಡೆಸಿದ ಸಂವಾದದ ಪ್ರತಿಫಲ. ರಾಜಸ್ಥಾನದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ರಚನೆಗೆ ಪಕ್ಷದ ಬೂತ್ ಮಟ್ಟದಿಂದ ಕಾಂಗ್ರೆಸ್ ಅಧ್ಯಕ್ಷರವರೆಗೆ ಇಡೀ ಪಕ್ಷ ಒಗ್ಗೂಡಿ ಕಾರ್ಯ ನಿರ್ವಹಿಸುತ್ತಿದೆ' ಎಂದು ಅವರು ಹೇಳಿದ್ದಾರೆ.
'ನಾವು ಭರ್ಜರಿ ಜಯದೊಂದಿಗೆ ಅಧಿಕಾರಕ್ಕೆ ಮರಳುತ್ತೇವೆ ಎಂಬುದರಲ್ಲಿ ಸಂಶಯವಿಲ್ಲ- ಏಕೆಂದರೆ, ರಾಜಸ್ಥಾನದ ಎಂಟು ಕೋಟಿ ಜನರೊಂದಿಗೆ ಕಾಂಗ್ರೆಸ್‌ಗೆ ಸದೃಢ ಬಂಧವಿದೆ ಅಲ್ಲದೆ ಪಕ್ಷವು ಕಾಂತ್ರಿಕಾರಕ ಆಡಳಿತವನ್ನು ನೀಡಿದೆ' ಎಂದೂ ತಿಳಿಸಿದ್ದಾರೆ.