ನವದೆಹಲಿ: ನಿರ್ಲಕ್ಷ್ಯದಿಂದ ಸಂಭವಿಸುವ ಸಾವಿನ ಪ್ರಕರಣಕ್ಕೆ ಸಂಬಂಧಿಸಿ, ಪ್ರಸ್ತಾವಿತ ಭಾರತೀಯ ನ್ಯಾಯ ಸಂಹಿತೆ ಮಸೂದೆಯಲ್ಲಿ ನಿಗದಿಪಡಿಸಿರುವ ಏಳು ವರ್ಷ ಶಿಕ್ಷೆಯ ಬಗ್ಗೆ ಸಂಸದೀಯ ಸ್ಥಾಯಿಸಮಿತಿ ಆಕ್ಷೇಪ ವ್ಯಕ್ತಪಡಿಸಿದ್ದು, ಸಜೆಯ ಪ್ರಮಾಣವನ್ನು ಐದು ವರ್ಷಕ್ಕೆ ಇಳಿಸುವಂತೆ ಶಿಫಾರಸು ಮಾಡಿದೆ.
ನವದೆಹಲಿ: ನಿರ್ಲಕ್ಷ್ಯದಿಂದ ಸಂಭವಿಸುವ ಸಾವಿನ ಪ್ರಕರಣಕ್ಕೆ ಸಂಬಂಧಿಸಿ, ಪ್ರಸ್ತಾವಿತ ಭಾರತೀಯ ನ್ಯಾಯ ಸಂಹಿತೆ ಮಸೂದೆಯಲ್ಲಿ ನಿಗದಿಪಡಿಸಿರುವ ಏಳು ವರ್ಷ ಶಿಕ್ಷೆಯ ಬಗ್ಗೆ ಸಂಸದೀಯ ಸ್ಥಾಯಿಸಮಿತಿ ಆಕ್ಷೇಪ ವ್ಯಕ್ತಪಡಿಸಿದ್ದು, ಸಜೆಯ ಪ್ರಮಾಣವನ್ನು ಐದು ವರ್ಷಕ್ಕೆ ಇಳಿಸುವಂತೆ ಶಿಫಾರಸು ಮಾಡಿದೆ.
ಇಂಡಿಯನ್ ಪೀನಲ್ ಕೋಡ್ (ಭಾರತೀಯ ದಂಡ ಸಂಹಿತೆ) ಬದಲಿಗೆ ಕೇಂದ್ರ ಸರ್ಕಾರವು ಈ ನ್ಯಾಯ ಸಂಹಿತೆ ಮಸೂದೆ ಮಂಡಿಸಿದೆ.
ಗೃಹ ಸಚಿವಾಲಯದ ವಿಷಯಗಳಿಗೆ ಸಂಬಂಧಿಸಿದಂತೆ ರಚಿಸಿರುವ ಸ್ಥಾಯಿಸಮಿತಿಗೆ ಬಿಜೆಪಿ ಸದಸ್ಯ ಬ್ರಿಜ್ ಲಾಲ್ ಅಧ್ಯಕ್ಷರಾಗಿದ್ದು, ಕೇಂದ್ರವು ಲೋಕಸಭೆಯಲ್ಲಿ ಮಂಡಿಸಿರುವ ಮೂರು ಮಸೂದೆಗಳ ಬಗ್ಗೆ ಸಮಿತಿಯು ಪರಾಮರ್ಶೆ ನಡೆಸುತ್ತಿದೆ.
ಅಜಾಗರೂಕತೆ ಅಥವಾ ನಿರ್ಲಕ್ಷ್ಯದಿಂದ ಸಂಭವಿಸುವ ಸಾವು, ಸ್ಥಳದಿಂದ ಪರಾರಿಯಾಗುವುದು, ಅವಘಡದ ಬಗ್ಗೆ ಪೊಲೀಸರು ಅಥವಾ ನ್ಯಾಯಾಧೀಶರಿಗೆ ಮಾಹಿತಿ ನೀಡದಿರುವ ಬಗ್ಗೆ ನ್ಯಾಯ ಸಂಹಿತೆಯಲ್ಲಿ 10 ವರ್ಷ ಸಜೆ ವಿಧಿಸಲು ಪ್ರಸ್ತಾಪಿಸಲಾಗಿದೆ. ಈ ಶಿಕ್ಷೆಯನ್ನು ಉಳಿಸಿಕೊಳ್ಳಬೇಕೇ ಎಂಬ ಬಗ್ಗೆ ಮತ್ತಷ್ಟು ಚರ್ಚೆ ನಡೆಸುವ ಅಗತ್ಯವಿದೆ ಎಂದು ಸ್ಥಾಯಿಸಮಿತಿ ಹೇಳಿದೆ.
ಐಪಿಸಿ ಸೆಕ್ಷನ್ 304(ಎ) 'ನಿರ್ಲಕ್ಷ್ಯದಿಂದ ಸಾವು' ಅಪರಾಧಕ್ಕೆ ಸಂಬಂಧಿಸಿದೆ. ಇದರ ಅಡಿ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.
ಉದ್ದೇಶಿತ ಮಸೂದೆಯ ಸೆಕ್ಷನ್ 104(1)ರ ಅಡಿ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದರೆ ಉದ್ದೇಶಪೂರ್ವಕವಲ್ಲದ ನರಹತ್ಯೆ ಪ್ರಕರಣ ದಾಖಲಿಸಲಾಗುತ್ತದೆ. ಇದು ಶಿಕ್ಷಾರ್ಹ ಅಪರಾಧವಾಗಲಿದ್ದು, ಏಳು ವರ್ಷಗಳ ಸೆರೆವಾಸ ಹಾಗೂ ದಂಡ ವಿಧಿಸಲು ಅವಕಾಶವಿದೆ.
'ಯಾವುದೇ ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಯನ್ನು ತನ್ನ ವಿರುದ್ಧವೇ ಸಾಕ್ಷಿಯಾಗಿ ಮಾರ್ಪಡಿಸಲು ಸಂವಿಧಾನದ 20(3) ವಿಧಿಯು ಅವಕಾಶ ನೀಡುವುದಿಲ್ಲ. ಮಸೂದೆಯಲ್ಲಿ ಪ್ರಸ್ತಾಪಿಸಿರುವ ಸೆಕ್ಷನ್ 104(2) ಇದಕ್ಕೆ ವಿರುದ್ಧವಾಗಿದೆ. ಜತೆಗೆ, ಪ್ರಸ್ತಾಪಿಸಿರುವ ಶಿಕ್ಷೆಯ ಪ್ರಮಾಣ ಹೆಚ್ಚಿದ್ದು, ಕಡಿಮೆಗೊಳಿಸಬೇಕಿದೆ ಎಂದು ಸ್ಥಾಯಿಸಮಿತಿ ಹೇಳಿದೆ.