ಕಾಸರಗೋಡು: ಸಾಮಾಜಿಕ ಜಾಲ ತಾಣಗಳಲ್ಲಿ ಕೋಮು ದ್ವೇಷ ಹರಡುವ ಸಂದೇಶ ರವಾನಿಸಿರುವ ಬಗ್ಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಪಕ್ಷದ ವಕ್ತಾರ ಅನಿಲ್ ಆಂಟನಿ ಸೇರಿದಂತೆ ಇಬ್ಬರ ವಿರುದ್ಧ ಸೈಬರ್ ಸೆಲ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ವಿದ್ಯಾರ್ಥಿ ಸಂಘಟನೆ ಎಸ್.ಎಫ್.ಐ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಎಂ.ಟಿ ಸಿದ್ಧಾರ್ಥ್ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಈ ಕೇಸು ದಾಖಲಾಗಿದೆ. ಕುಂಬಳೆಯಲ್ಲಿ ಇತ್ತೀಚೆಗೆ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯರು ಖಾಸಗಿ ಬಸ್ ತಡೆದು ಪ್ರತಿಭಟನೆ ವ್ಯಕ್ತಪಡಿಸಿದ ವಿಡಿಯೋ ಬಳಸಿ ಕೋಮುದ್ವೇಷ ಹರಡುವ ರೀತಿಯ ಸಂದೇಶ ರವಾನಿಸಿರುವುದಾಗಿ ಆರೋಪಿಸಿ ಅನಿಲ್ ಆಂಟನಿ ಹಾಗೂ ಎಕ್ಸ್ ಅಕೌಂಟ್ ಐಡಿ ಆನಂದಿ ನಾಯರ್ ಎಂಬವರ ವಿರುದ್ಧ ಈ ಕೇಸು.
ಮುಸ್ಲಿಂ ವಿದ್ಯಾರ್ಥಿನಿಯರ ತಂಡ ಬಸ್ ತಡೆಯುತ್ತಿದ್ದಂತೆ ಬಸ್ಸಿನಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರು ವಿದ್ಯಾರ್ಥಿನಿಯರ ಜತೆ ವಾಗ್ವಾದಕ್ಕಿಳಿದಿದ್ದರು. ಈ ವಿಡಿಯೋವನ್ನು ಬಳಸಿ, ಕೇರಳದಲ್ಲಿ ಶಿರವಸ್ತ್ರ ಧರಿಸದ ಮಹಿಳೆಯನ್ನು ಯಾವ ರೀತಿ ನಡೆಸಿಕೊಳ್ಳಲಾಗುತ್ತಿದೆ ಎಂಬುದಾಗಿ ಚಿತ್ರಿಸಿ ಎಕ್ಸ್ ಅಕೌಂಟ್ ಸುಳ್ಳು ಸಂದೇಶ ಹರಡಿದ್ದು, ಇದನ್ನು ಅನಿಲ್ ಆಂಟನಿ ಶೇರ್ ಮಾಡಿಕೊಂಡಿದ್ದರು.