ಕಾಸರಗೋಡು: ರಾಜ್ಯ ಸರ್ಕಾರ ದಿನಬಳಕೆ ಸಾಮಾಗ್ರಿಗಳನ್ನು ಪೂರೈಸದೆ ಜನಸಾಮಾನ್ಯರನ್ನು ಹಸಿವಿನಿಂದ ಸಾಯುವಂತೆ ಮಾಡುತ್ತಿರುವುದಾಗಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ವೇಲಾಯುಧನ್ ತಿಳಿಸಿದ್ದಾರೆ.
ಅವರು ನಿತ್ಯೋಪಯೋಗಿ ಸಾಮಗ್ರಿ ಮಾರುಕಟ್ಟೆಗೆ ವಿತರಿಸುವಲ್ಲಿನ ಲೋಪ ಹಾಗೂ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಉದುಮ ಪಂಚಾಯಿತಿ ಸಮಿತಿ ವತಿಯಿಂದ ಉದುಮ ಸಪ್ಲೈಕೋ ಮಳಿಗೆ ಎದುರು ಆಯೋಜಿಸಲಾಗಿದ್ದ ಧರಣಿ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಜನತೆ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರೆ, ಪಿಣರಾಯಿ ವಇಜಯನ್ ಮತ್ತು ಸಚಿವ ಸಂಪುಟ ಸದಸ್ಯರು ಸರ್ಕಾರಿ ವೆಚ್ಚದಲ್ಲಿ ಐಷಾರಾಮಿ ಬಸ್ಸಿನ ಮೂಲಕ ಯಾತ್ರೆ ಹೊರಟಿರುವುದು ರಾಜ್ಯದ ಜನತೆಗೆ ಎಸಗಿರುವ ವಂಚನೆಯಾಗಿದೆ.
ನೀತಿ ಸ್ಟೋರ್ಸ್ ಮತ್ತು ಸಪ್ಲೈಕೋ ಮಳಿಗೆಗಳ ಮೂಲಕ ಪ್ರಸಕ್ತ ಲಭಿಸುವ ಉತ್ಪನ್ನಗಳಿಗೆ ಬೆಲೆ ಏರಿಕೆ ಮಾಡುವಮೂಲಕ ಜನತೆಗೆ ಪ್ರಹಾರ ನೀಡಲಾಗಿದೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಘೋಷಿಸಿರುವ ಹಾಗೂ ಕೇರಳಕ್ಕೆ ಮಂಜೂರು ಮಾಡಿರುವ ಹಣದಿಂದಲೇ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಜಾರಿಯಲ್ಲಿದೆ ಎಂದು ತಿಳಿಸಿದರು.
ಬಿಜೆಪಿ ಉದುಮ ಪಂಚಾಯಿತಿ ಸಮಿತಿ ಅಧ್ಯಕ್ಷ ವಿನಾಯಕ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಎಂ.ಉಮಾ, ಜಿಲ್ಲಾ ಸಮಿತಿ ಸದಸ್ಯ ವೈ.ಕೃಷ್ಣದಾಸ್, ಉದುಮ ಮಂಡಲ ಉಪಾಧ್ಯಕ್ಷ ತಂಬಾನ್ ಅಚ್ಚೇರಿ, ಒಬಿಸಿ ಮೋರ್ಚಾ ಮಂಡಲ ಅಧ್ಯಕ್ಷ ಪ್ರದೀಪ್ ಎಂ.ಕೊಟ್ಟಕಣಿ, ಚೆಮ್ಮನಾಡು ಪಂಚಾಯಿತಿ ಜನಪ್ರತಿನಿಧಿಗಳ ಕಾರ್ಯದರ್ಶಿ ಮುರಳಿಕೃಷ್ಣನ್ ಆಚೇರಿ ಮಾತನಾಡಿದರು. ಉದುಮ ಪಂಚಾಯತ್ ಜನ.ಕಾರ್ಯದರ್ಶಿ ಮಧುಸೂದನನ್ ಅಡ್ಕತ್ತಬೈಲ್ ಸ್ವಾಗತಿಸಿದರು. ಕಾರ್ಯದರ್ಶಿ ವಿನಿಲ್ ಮುಳ್ಳಚೇರಿ ವಂದಿಸಿದರು.