ವಾರಣಾಸಿ: ಜ್ಞಾನವಾಪಿ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆ ವರದಿ ಸಲ್ಲಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ) ಮಂಗಳವಾರ ಇಲ್ಲಿನ ಜಿಲ್ಲಾ ನ್ಯಾಯಾಲಯಕ್ಕೆ ಮೂರು ವಾರಗಳ ಕಾಲಾವಕಾಶ ಕೋರಿದೆ. ನ್ಯಾಯಾಲಯ ಇಂದು (ಬುಧವಾರ) ಅರ್ಜಿಯ ವಿಚಾರಣೆ ನಡೆಸಲಿದೆ.
ವಾರಣಾಸಿಯ ಜಿಲ್ಲಾ ನ್ಯಾಯಾಲಯ ನವೆಂಬರ್ 28 ರೊಳಗೆ ಜ್ಞಾನವಾಪಿ ಮಸೀದಿ ಸಂಕೀರ್ಣದ ವರದಿ ಸಲ್ಲಿಸುವಂತೆ ಎಎಸ್‌ಐಗೆ ಸೂಚಿಸಿತ್ತು.
ಎಎಸ್‌ಐ ವರದಿ ಸಲ್ಲಿಸಲು ಇನ್ನೂ ಮೂರು ವಾರಗಳ ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸಿದೆ. ವಿಭಿನ್ನ ತಜ್ಞರು ರಚಿಸಿದ ಮಾಹಿತಿಯನ್ನು ಒಟ್ಟುಗೂಡಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಹಿಂದೂ ಪರ ವಕೀಲ ಮದನ್ ಮೋಹನ್ ಯಾದವ್ ಅವರು ತಿಳಿಸಿದ್ದಾರೆ.
ಪುರಾತತ್ವಶಾಸ್ತ್ರಜ್ಞರು, ಸರ್ವೇಯರ್‌ಗಳು ಮತ್ತು ಇತರ ತಜ್ಞರು ಸಂಗ್ರಹಿಸಿದ ವಿವಿಧ ರೀತಿಯ ದತ್ತಾಂಶಗಳ ಮೇಲೆ ತಜ್ಞರು ಕೆಲಸ ಮಾಡುತ್ತಿದ್ದಾರೆ ಎಂದು ಎಎಸ್‌ಐ ತನ್ನ ಅರ್ಜಿಯಲ್ಲಿ ತಿಳಿಸಿದೆ.
"ವಿವಿಧ ತಜ್ಞರು ಮತ್ತು ವಿಭಿನ್ನ ಸಾಧನಗಳಿಂದ ರಚಿಸಲಾದ ಮಾಹಿತಿಯನ್ನು ಒಟ್ಟುಗೂಡಿಸುವುದು ಕಷ್ಟಕರ ಮತ್ತು ನಿಧಾನ ಪ್ರಕ್ರಿಯೆಯಾಗಿದೆ. ಅಂತಿಮವಾಗಿ ವರದಿ ಸಿದ್ಧಪಡಿಸಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಅದನ್ನು ಸಲ್ಲಿಸಲು ಎಎಸ್‌ಐಗೆ ಇನ್ನೂ ಮೂರು ವಾರಗಳ ಕಾಲಾವಕಾಶ ನೀಡುವಂತೆ ನ್ಯಾಯಾಲಯವನ್ನು ಕೋರಲಾಗಿದೆ" ಎಂದು ಯಾದವ್ ಅವರು ಹೇಳಿದ್ದಾರೆ.