ಮಂಜೇಶ್ವರ: ರಾಜಕೀಯವಾಗಿ ದಿವಾಳಿ ಎದ್ದಿರುವ ಕೇರಳದಲ್ಲಿ ಮುಖ್ಯಮಂತ್ರಿಗೂ ಬೆಲೆ ಇಲ್ಲದಾಗಿದೆ. ರಾಜಕೀಯ ಲಾಭಕ್ಕಾಗಿ ಮುಖ್ಯಮಂತ್ರಿ ಹಾಗೂ ಮಂತ್ರಿಗಳು ರಸ್ತೆ ಬದಿಯಲ್ಲಿ ಮಾಡುವ ಕಾರ್ಯಕ್ರಮಕ್ಕೆ ಜನ ಸೇರರು ಎಂಬ ಇಲಾಖೆಯ ವರದಿಯ ಹಿನ್ನಲೆಯಲ್ಲಿ ಮುಖ್ಯಮಂತ್ರಿಯ ಕಾರ್ಯಕ್ರಮಕ್ಕೆ ಜನ ಸೇರಿಸಲು ಕುಟುಂಬಶ್ರೀಯನ್ನು ಬೆದರಿಸುತ್ತಿರುವ ತಂತ್ರ ಸಿಪಿಎಂ ಪಕ್ಷದ ರಾಜಕೀಯ ದಿವಾಳಿಯ ಸಂಕೇತ ಎಂದು ಬಿಜೆಪಿ ಆರೋಪಿಸಿದೆ.
ಅಟಲ್ ಬಿಹಾರಿ ವಾಜಪಾಯಿಯವರ ಸಂಕಲ್ಪ ಕುಟುಂಬ ಶ್ರೀ ಯೋಜನೆಯಾಗಿದೆ. ಆದರೆ ಇಂದು ಕೇರಳದಲ್ಲಿ ಕುಟುಂಬ ಶ್ರೀಯನ್ನು ಬೆದರಿಸಿ ಪಿಣರಾಯಿ ಕಾರ್ಯಕ್ರಮಕ್ಕೆ ಜನ ಸೇರಿಸಲು ಒತ್ತಡ ಹೇರುತ್ತಿರುವುದು ಅಧಿಕಾರದ ದುರುಪಯೋಗ ಎಂದು ಬಿಜೆಪಿ ತಿಳಿಸಿದೆ.
ಬಿಜೆಪಿಯಿಂದ ನವ ಕೇರಳ ಕಾರ್ಯಕ್ರಮ ಬಹಿಷ್ಕಾರ:
ಒತ್ತಡ ಹೇರಿ ಕುಟುಂಬ ಶ್ರೀ ಕಾರ್ಯಕರ್ತೆಯರನ್ನು, ಉದ್ಯೋಗ ಖಾತರಿ ನೌಕರರನ್ನು, ಹಸಿರು ಕ್ರಿಯಾಸೇನೆ ಸೇವಕರನ್ನು ಕಾರ್ಯಕ್ರಮಕ್ಕೆ ಹಾಜರು ಮಾಡುವಂತೆ ಸರ್ಕಾರ ನೀಡಿರುವ ಅಧಿಕಾರ ದುರುಪಯೋಗ ಆದೇಶ ಒಪ್ಪಲು ಸಾಧ್ಯವಿಲ್ಲ. ಕುಟುಂಬಶ್ರೀ ಕಾರ್ಯಕರ್ತರು ನವಕೇರಳ ಕಾರ್ಯಕ್ರಮದಲ್ಲಿ ಭಾಗವಹಿಸಬಾರದೆಂದು ಬಿಜೆಪಿ ವಿನಂತಿಸಿದೆ.
ಬಿಜೆಪಿ ಮಂಜೇಶ್ವರ ಪಂಚಾಯತಿ ಮಟ್ಟದ ಸಭೆ ಸೋಮವಾರ ಹೊಸಂಗಡಿ ಪ್ರೇರಣಾದಲ್ಲಿ ಜರಗಿತು. ಸುಧಾಮ ಗೊಸಾಡ ಮಾಹಿತಿ ನೀಡಿದರು. ಮಂಡಲ ಅಧ್ಯಕ್ಷ ಆದರ್ಶ್ ಬಿ ಎಂ., ಮುಖಂಡರಾದ ಯಾದವ ಬಡಾಜೆ, ಹರಿಶ್ಚಂದ್ರ ಎಂ, ಮಣಿಕಂಠ ರೈ,ರಾಜೇಶ್ ಮಜಲು, ಲಕ್ಷ್ಮಣ ಬಿ.ಎಂ, ವಿನಯ ಭಾಸ್ಕರ್, ಸುರೇಶ ಶೆಟ್ಟಿ, ಸುಪ್ರಿಯಾ ಶನೈ, ಎ.ಕೆ.ಕಯ್ಯಾರ್, ತುಳಸಿ ಕುಮಾರಿ, ರಕ್ಷಣ್ ಅಡಕಳ, ಭಾಸ್ಕರ್ ಪೊಯ್ಯೆ ಉಪಸ್ಥಿತರಿದ್ದರು. ಚಂದ್ರಹಾಸ ಸ್ವಾಗತಿಸಿ, ಯತಿರಾಜ್ ವಂದಿಸಿದರು. ನವಂಬರ್ 10 ರಂದು ಕಣ್ವತೀರ್ಥದಿಂದ ಆರಂಭವಾಗುವ ರವೀಶ ತಂತ್ರಿ ನೇತೃತ್ವದ ತೀರ ದೇಶ ವಾಹನ ಜಾಥಾ ಯಶಸ್ವಿಗೆ ತೀರ್ಮಾನಿಸಲಾಯಿತು.