ಸಿಂಗಪುರ: ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್ ನಡುವೆ ನಡೆಯುತ್ತಿರುವ ಕದನದ ಬಗ್ಗೆ ಚರ್ಚಿಸಲು ಅರಬ್, ಇಸ್ಲಾಮಿಕ್ ಹಾಗೂ ಆಫ್ರಿಕನ್ ದೇಶಗಳ ಶೃಂಗಸಭೆ ಆಯೋಜಿಸಲಾಗುವುದು ಎಂದು ಸೌದಿ ಅರೇಬಿಯಾದ ಬಂಡವಾಳ ಸಚಿವ ಖಾಲಿದ್ ಅಲ್-ಫಾಲಿಹ್ ಮಂಗಳವಾರ ಹೇಳಿದ್ದಾರೆ.
'ಕೆಲ ದಿನಗಳಲ್ಲಿ ಸೌದಿ ಅರೇಬಿಯಾವು ರಿಯಾದ್‌ನಲ್ಲಿ ತುರ್ತು ಅರಬ್ ಸಮ್ಮಿಟ್ ನಡೆಸಲಿದೆ' ಎಂದು ಅವರು ಹೇಳಿದ್ದಾರೆ.
'ಕೆಲ ದಿನಗಳಲ್ಲಿ ರಿಯಾದ್‌ನಲ್ಲಿ ಸೌದಿ ಅರೇಬಿಯಾವು ಆಫ್ರಿಕಾ-ಸೌದಿ ಶೃಂಗ ಆಯೋಜಿಸುವುದನ್ನು ನೀವು ನೋಡಲಿದ್ದೀರಿ. ಅದಾದ ಬಳಿಕ ಇಸ್ಲಾಮಿಕ್ ಸಮ್ಮೇಳನವೂ ನಡೆಯಲಿದೆ' ಎಂದು ಅವರು ತಿಳಿಸಿದರು.
' ಚುಟುಕಾಗಿ ಹೇಳುವುದಾದರೆ, ಸೌದಿ ಅರೇಬಿಯಾದ ನಾಯಕತ್ವದಲ್ಲಿ ನಡೆಯುವ ಈ ಮೂರು ಸಮ್ಮೇಳನ ಹಾಗೂ ಇತರ ಅಧಿವೇಶನದ ಮೂಲಕ ಸಂಘರ್ಷಕ್ಕೆ ಶಾಂತಿಯಯುತ ಪರಿಹಾರ ನೀಡುವ ಉದ್ದೇಶ ಹೊಂದಿದೆ' ಎಂದು ಅವರು ಹೇಳಿದ್ದಾರೆ.
ಇಸ್ಲಾಮಿಕ್ ಸಹಕಾರ ಸಂಘಟನೆಯ ಶೃಂಗದಲ್ಲಿ ಭಾಗಿಯಾಗಲು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಭಾನುವಾರ ಸೌದಿ ಅರೇಬಿಯಾಗೆ ತೆರಳಲಿದ್ದಾರೆ. ಸೌದಿ ಹಾಗೂ ಇರಾನ್ ನಡುವೆ ಇದ್ದ ಹಲವು ವರ್ಷಗಳ ವೈಷ್ಯಮ್ಯವನ್ನು ಚೀನಾ ಮಧ್ಯಸ್ಥಿಕೆ ವಹಿಸಿ ಅಂತ್ಯಗೊಳಿಸಿತ್ತು. ಇದಾದ ಬಳಿಕ ಇರಾನ್ ಅಧ್ಯಕ್ಷರೊಬ್ಬರು ಸೌದಿಗೆ ಪ್ರಯಾಣಿಸುತ್ತಿರುವುದು ಇದೇ ಮೊದಲು.