ಬೆಂಗಳೂರು: ಸಂಸ್ಕøತಿ ಮತ್ತು ಭಾಷೆ ಒಂದಕ್ಕೊಂದು ಪೂರಕವಾಗಿದ್ದು, ಒಂದು ಇಲ್ಲವಾದಲ್ಲಿ ಇನ್ನೊಂದೂ ನಾಶವಾಗುತ್ತದೆ. ಆರಂಭಿಕ ಓದಿನ ಅಭ್ಯಾಸದಲ್ಲಿ ಶ್ರೇಷ್ಠತೆಯ ವ್ಯಸನ ಸಲ್ಲದು ಎಂದು ಬಹುಶ್ರುತ ವಿದ್ವಾಂಸ, ಶತಾವಧಾನಿ ಡಾ.ಆರ್.ಗಣೇಶ್ ತಿಳಿಸಿದರು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತಿನ ಸಾಹಿತ್ಯ ವಿಭಾಗ ಕೆಂಪೇಗೌಡ ನಗರದಲ್ಲಿರುವ ‘ಕೇಶವಶಿಲ್ಪ’ ಸಭಾಂಗಣದಲ್ಲಿ ಆಯೋಜಿಸಿರುವ ಒಂದು ತಿಂಗಳ ಕನ್ನಡ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ‘3ನೆಯ ಕನ್ನಡ ಪುಸ್ತಕ ಹಬ್ಬ’ದ ಭಾಗವಾಗಿ ಶನಿವಾರ ಸಂಜೆ ಆಯೋಜಿಸಿದ್ದ ‘ವ್ಯಾಸಂಗದ ಹವ್ಯಾಸ’ ವಿಷಯದಲ್ಲಿ ಲೇಖಕ, ಸಾಪ್ಟ್ ವೇರ್ ತಂತ್ರಜ್ಞ ಎಚ್.ಎ.ವಾಸುಕಿ ಅವರು ನಡೆಸಿದ ಸಂವಾದದಲ್ಲಿ ಮಾತನಾಡಿದರು.
ಸುಖ, ಸೌಖ್ಯಕ್ಕಾಗಿ ಓದಿನ ಹವ್ಯಾಸ ರೂಢಿಸಬೇಕು. ಇದು ಎಳವೆಯಿಂದಲೇ ರೂಢಿಸಿದರೆ ಮಾತ್ರ ಹವ್ಯಾಸವಾಗಿ ಬೆಳೆಯಲು ಸಾಧ್ಯ. ಕಲ್ಪನೆ ಓದಿನ ಮೀಟುಗೋಲಾಗಿದ್ದು, ಕಿವಿ ಕೇಳಿದ್ದನ್ನು ಕಣ್ಣು ಕಲ್ಪಿಸುತ್ತದೆ. ಅರ್ಥಮಾಡಿಕೊಂಡು ಓದಬೇಕೆಂಬ ಹಠ ಸಾಧುವಲ್ಲ ಎಂದವರು ತಿಳಿಸಿದರು.
ಸಂಸ್ಕøತ ಆಯಾ ಪ್ರಾದೇಶಿಕ ಭಾಷೆಗಿಂತ ಭಿನ್ನವೋ, ವ್ಯತಿರಿಕ್ತವೋ ಅಲ್ಲ. ಒಂದರಮೇಲೊಂದು ಪ್ರಭಾವ, ಪ್ರೇರಣೆ ಇದೆ. ಈನಿಟ್ಟಿನಲ್ಲಿ ಭಿನ್ನ ತರ್ಕಗಳಿಗೆ ಹುರುಳಿಲ್ಲ. ವ್ಯಾಸಂಗ ಅಥವಾ ಕಲಿಕೆಯಲ್ಲಿ ಪೋಷಕರ ಪಾತ್ರ ಎಂದಿಗೂ ಮಹತ್ತರವಾದುದಾಗಿದೆ. ಪೋಷಕರು ಅನುಸರಿಸಿ ವಾತಾವರಣವೊಂದನ್ನು ಸೃಷ್ಟಿಸಿದಲ್ಲಿ ಕನಿಷ್ಠ ಅದರ ವಾಸನೆಯಾದರೂ ಮೈಗೂಡುತ್ತದೆ. ಓದು ಭಾರವಲ್ಲ ಎಂಬ ಭಾವ ನಮ್ಮಲ್ಲಿರಬೇಕು ಎಂದರು.
ಅಭಿಜಾತ ಕೃತಿಗಳ ಮೂಲ ಬರಹಗಳನ್ನೇ ಓದುವುದು ಹೆಚ್ಚುಸೂಕ್ತ. ಶಾಸ್ತ್ರೀಯತೆ ರಹಿತ ಬರಹಗಳ ಅಥ್ರ್ಯಸುವಿಕೆ ಜಟಿಲವಾದುದು. ಈ ನಿಟ್ಟಿನಲ್ಲಿ ಅಭಿಜಾತ ಸಾಹಿತ್ಯ, ಬರಹಗಳನ್ನು ಓದಿದಂತೆ ಮಾಹಿತಿ, ಅರಿವು ಸುಲಭಸಾಧ್ಯವಾಗುತ್ತದೆ ಎಂದವರು ತಿಳಿಸಿದರು.
ಗ್ರಹಿಸುತ್ತಾ ಸಾಗಿದಂತೆ ‘ನಾನೆಂಬ ಭಾವ’ ಬೆಳೆಯುವುದೇ ಸಂತೋಷದ ರಹಸ್ಯ. ಇಲ್ಲಿ ‘ನಾನೆಂಬುದು’ ಅರಿವೆಂಬ ಸಾಗರದ ಸಂಕೇತ. ಭಾವಾಭಿವ್ಯಕ್ತಿಗೆ ಕಲೆ ಪೂರಕ. ಸಂಗೀತಕ್ಕೆ ಈ ತೀವ್ರತೆ ಇದೆ. ಭಾವಕ್ಕೆ ಬೇಕಾದುದನ್ನು ಒದಗಿಸುವ ಅಭಿಜಾತ ಕಲೆ ದೇಶ-ಕಾಲಗಳ ನಿರ್ಬಂಧ ಮೀರಿ ಸರ್ವ ಜನರಿಗೂ ಮುಟ್ಟುವ-ಮನತಟ್ಟುವ ಮಾಧ್ಯಮ ಎಂದವರು ಈ ಸಂದರ್ಭ ತಿಳಿಸಿದರು. ಪ್ರತ್ಯೇಕತೆ ಎಂಬುದು ಭ್ರಮೆಯಾಗಿದ್ದು, ಕೇವಲ ಅದ್ವೈತ ದೃಷ್ಟಿಯಷ್ಟೇ ದರ್ಶನ. ಲೋಕೋತ್ತರದೆಡೆಗೆ ದೃಷ್ಟಿನೆಡುವ ಇಂತಹ ದರ್ಶನಗಳು ನಮ್ಮನ್ನು ಸಾಗರಗೊಳಿಸುತ್ತದೆ ಎಂದರು.
ಅರಿವು, ತಿಳುವಳಿಕೆಗಳು ಸಮಸ್ಯೆಗಳನ್ನು ನಿವಾರಿಸುತ್ತದೆ. ಆದರೆ, ಸ್ಪಷ್ಟ ನಿರ್ದೇಶನಗಳನ್ನು ನೀಡದ ಗೊಂದಲಮಯ ನಿರ್ದೇಶನಗಳು ದಾರಿತಪ್ಪಿಸುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲಿಂದ, ಏನನ್ನು ತಿಳಿಯಬೇಕೆಂಬ ಸ್ಪಷ್ಟತೆ ನಮ್ಮಲ್ಲಿರಬೇಕು. ಸುಲಭ ಅರಿವಿನ ಹುಚ್ಚುತನ ಅವಘಡಗಳಿಗೆ ಕಾರಣವಾಗುತ್ತದೆ. ಆಧುನಿಕ ತಂತ್ರಜ್ಞಾನ ಅಗತ್ಯಕ್ಕಷ್ಟೇ ಬಳಕೆಯಾಗಬೇಕಿದ್ದು, ಆನ್‍ಲೈನ್ ಓದು ಸ್ವೀಕಾರಾರ್ಹವಲ್ಲ ಎಂದವರು ವಿಶ್ಲೇಶಿಸಿದರು. ಶಾಸ್ತ್ರೀಯ ಬರಹ, ಅರಿವುಗಳು ಬೃಹತ್ ಮಟ್ಟದ ವಿಸ್ತಾರತೆ ಹೊಂದಿದ್ದು, ಅಲ್ಲಿ ಸಂಶಯಗಳಿಗೆ ಎಡೆಯಿಲ್ಲ. ನಿಶ್ಚಯದ ಜ್ಞಾನ ಲಭ್ಯವಾದಾಗ ಹಪಹಪಿ ನಿವಾರಣೆಯಾಗುತ್ತದೆ. ದೇಶಪ್ರತಿಷ್ಠೆಗಿಂತ ಕಾಲಪ್ರತಿಷ್ಠೆ ಉತ್ತಮವಾದುದು ಎಂದವರು ಸಂವಾದದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಷ್ಟ್ರೋತ್ಥಾನ ಪರಿಷತ್ತಿನ ಸಂಚಾಲಕ ವಿಘ್ನೇಶ್ವರ ಭಟ್ ಅತಿಥಿಗಳನ್ನು ಗೌರವಿಸಿದರು. ಶ್ರೀಮತಿ.ರಶ್ಮಿ ವಿನಯ್ ಸ್ವಾಗತಿಸಿ, ವಂದಿಸಿದರು.