'ಆಯಂಟಿ ಮ್ಯಾಟರ್' ಕುರಿತಾದ ಚರ್ಚೆ ಈಚಿನ ದಿನಗಳಲ್ಲಿ ಸಾಕಷ್ಟು ನಡೆಯುತ್ತಿದೆ. ಸಾಂಪ್ರದಾಯಿಕ ಇಂಧನಮೂಲಗಳು ಗರಿಷ್ಠ 50 ವರ್ಷಗಳು ಮಾತ್ರ ಸಿಗಬಲ್ಲದು ಎಂಬ ಅಂದಾಜಿದೆ. ಹಾಗಾದರೆ, ಮುಂದಿನ ದಿನಗಳ ಗತಿಯೇನು ಎಂಬುದು ಬಹು ಮುಖ್ಯ ಪ್ರಶ್ನೆ. ನವೀಕರಿಸಬಹುದಾದ ಶಕ್ತಿಮೂಲಗಳಾದ ಸೌರಶಕ್ತಿ, ವಾಯುಶಕ್ತಿಯ ಮೂಲಗಳು ಭೂಮಿಯ ಮೇಲಿನ ಬಹುದೊಡ್ಡ ಜನಸಂಖ್ಯೆಯ ಇಂಧನ ಬೇಡಿಕೆಯನ್ನು ಈಡೇರಿಸಲಾರವು.
ಸ್ವಿಟ್ಸರ್‌ಲ್ಯಾಂಡ್‌ನಲ್ಲಿರುವ ಸಿಇಆರ್‌ಎನ್ (ಯೂರೋಪ್ ಪರಮಾಣು ಸಂಶೋಧನಾ ಸಮಿತಿ) ವಿಜ್ಞಾನಿಗಳು 90ರ ದಶಕದಲ್ಲಿಯೇ ಕೃತಕವಾಗಿ ಕೆಲವೇ ಕೆಲವು ಮೈಕ್ರೋ ಗ್ರಾಂ ಆಯಂಟಿ ಮ್ಯಾಟರ್ ಅನ್ನು ತಮ್ಮ ಪ್ರಯೋಗಾಲಯದಲ್ಲಿ ಸೃಷ್ಟಿಸಿದ್ದಾರೆ. ಆದರೆ, ಈ ಆಯಂಟಿ ಮ್ಯಾಟರ್‌ಗೆ ಅದರದೇ ಮಿತಿಗಳಿವೆ. ಮೊದಲ ಮಿತಿ ತಯಾರಿ ವೆಚ್ಚ. ಒಂದು ಗ್ರಾಂ ಆಯಂಟಿ ಮ್ಯಾಟರ್ ಉತ್ಪಾದನೆಗೆ ಕನಿಷ್ಠವೆಂದರೂ ಒಂದು ಕೋಟಿ ಡಾಲರ್ ಹಣ ಖರ್ಚಾಗುತ್ತದೆ! ಅಲ್ಲದೇ, ಈ ಆಯಂಟಿ ಮ್ಯಾಟರ್‌ನ ಉತ್ಪಾದನೆ ಸದ್ಯಕ್ಕೆ ಅಸಾಧ್ಯ. ಏಕೆಂದರೆ, ಅದಕ್ಕೆ ಬೇಕಾಗುವ ಮೂಲಸೌಕರ್ಯ, ನುರಿತ ಸಿಬ್ಬಂದಿ, ವಿಜ್ಞಾನಿಗಳು ಹಾಗೂ ತಂತ್ರಜ್ಞಾನದ ಲಭ್ಯತೆ ಇಲ್ಲ. ಅಲ್ಲದೇ, ಇಷ್ಟೆಲ್ಲಾ ಕಸರತ್ತು ಮಾಡಿದರೂ ಉತ್ಪಾದನೆಯಾಗುವ ಆಯಂಟಿ ಮ್ಯಾಟರ್ ಕೇವಲ ಕೆಲವೇ ಗ್ರಾಂಗಳು ಮಾತ್ರ. ಹಾಗಾಗಿ, ಆಯಂಟಿ ಮ್ಯಾಟರ್ ಅನ್ನು ಕೃತಕವಾಗಿ ಸೃಷ್ಟಿಸದೇ ಅದಿರುವ ಜಾಗದಿಂದಲೇ ಅದನ್ನು ಭೂಮಿಗೆ ಸಾಗಿಸುವುದು ಸೂಕ್ತ ಎಂದು ವಿಜ್ಞಾನಿಗಳು ಹೇಳಿ ಹೊಸ ಮಾರ್ಗಸೂಚಿಗಳನ್ನು ಹಾಕಿಕೊಟ್ಟಿದ್ದಾರೆ.
ಈ ಮಾರ್ಗಸೂಚಿಗಳು ಸಂಕೀರ್ಣವಾದವು. ಇವನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಆಯಂಟಿ ಮ್ಯಾಟರ್ ಎಂದರೇನು ಎಂಬ ಜ್ಞಾನ ಇರಬೇಕು. ಅತಿ ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ನಮ್ಮ ಭೂಮಿ ಅಥವಾ ಪ್ರಪಂಚದಲ್ಲಿರುವ ಎಲ್ಲ ಅಣುಗಳಲ್ಲೂ (ಮ್ಯಾಟರ್) ಎಲೆಕ್ಟ್ರಾನ್, ಪ್ರೋಟಾನ್ ಹಾಗೂ ನ್ಯೂಕ್ಲಿಯಸ್‌ಗಳೆಂಬ ಅಂಶಗಳಿರುತ್ತವೆ. ನ್ಯೂಕ್ಲಿಯಸ್ ಅಣುವಿನ ಕೇಂದ್ರ. ಅದರ ಸುತ್ತಲೂ ಎಲೆಕ್ಟ್ರಾನ್‌ಗಳು ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ಸುತ್ತುತ್ತಿರುತ್ತವೆ. ಈ ಪ್ರಕ್ರಿಯೆಗೆ ಸಂಪೂರ್ಣ ವಿರುದ್ಧವಾಗಿ ಅಂದರೆ, ಆಯಂಟಿ ಮ್ಯಾಟರ್ ಒಳಗಿನ ನ್ಯೂಕ್ಲಿಯಸ್‌ನ ಸುತ್ತಲೂ ಪ್ರೋಟಾನ್ ಗಡಿಯಾರ ಮುಳ್ಳು ತಿರುಗುವ ವಿರುದ್ಧ ದಿಕ್ಕಿನಲ್ಲಿ ಸುತ್ತುತ್ತಿರುತ್ತದೆ. ಹಾಗಾಗಿ, ಮ್ಯಾಟರ್ ಹಾಗೂ ಆಯಂಟಿ ಮ್ಯಾಟರ್‌ಗಳನ್ನು ಒಂದಕ್ಕೊಂದು ಡಿಕ್ಕಿ ಹೊಡೆದಾಗ ಅವುಗಳ ವಿರುದ್ಧಗುಣ ಹೊಂದದೇ ಅಪಾರ ಶಕ್ತಿಯೊಂದಿಗೆ ಸ್ಫೋಟಗೊಳ್ಳುತ್ತವೆ. ಆಗ ಉತ್ಪತ್ತಿಯಾಗುವ ಶಾಖವನ್ನು ವಿದ್ಯುತ್ತಾಗಿ ಪರಿವರ್ತಿಸಬಹುದು.
ಆದರೆ, ಆಯಂಟಿ ಮ್ಯಾಟರಿನ ಗುಣ ಬಲು ಅತಂತ್ರವಾದುದು. ಅದನ್ನು ಶೇಖರಿಡಿಸಿಡುವುದೂ ಕಷ್ಟ. ಜೊತೆಗೆ, ಅದು ಗುರುತ್ವಗುಣದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ವಿಜ್ಞಾನಿಗಳು ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ಈ ಕೆಲವು ವೈಜ್ಞಾನಿಕ ಊಹೆ ಹಾಗೂ ಸಿದ್ಧಾಂತಗಳನ್ನು ವಿಜ್ಞಾನಿಗಳು ಅಲ್ಲಗಳೆದಿದ್ದು, ಆಯಂಟಿ ಮ್ಯಾಟರ್ ಗುರುತ್ವಶಕ್ತಿಯಿಂದ ಬಿಡಿಸಿಕೊಂಡು ಹೋಗಲಾರದು ಎಂದು ಸಾಬೀತು ಮಾಡಿದ್ದಾರೆ.
ಮತ್ತದೇ 'ಸಿಇಆರ್‌ಎನ್'ನ ವಿಜ್ಞಾನಿಗಳು ಈ ಸಂಶೋಧನೆ ಮಾಡಿದ್ದಾರೆ. ಅಮೆರಿಕದ 'ನೇಚರ್' ನಿಯತಕಾಲಿಕೆಯಲ್ಲಿ ಈಗಷ್ಟೇ ತಮ್ಮ ಸಂಶೋಧನೆಯನ್ನು ಪ್ರಕಟಿಸಿದ್ದಾರೆ. ರಷ್ಯಾಮೂಲದ ವಿಜ್ಞಾನಿ, ಅಮೆರಿಕದ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನದ ನಿರ್ದೇಶಕ ವಿಚೆಸ್ಲಾವ್ ಲೂಕಿನ್ ಅವರನ್ನು ಒಳಗೊಂಡ ವಿಜ್ಞಾನಿಗಳ ತಂಡವು ಈ ಮಹತ್ವದ ಸಂಶೋಧನೆಯನ್ನು ಮಾಡಿದೆ. ಲೂನಿಕ್ ಅವರ ಈ ಹೇಳಿಕೆಯನ್ನು ಗಮನಿಸಿ: 'ಆಯಂಟಿ ಮ್ಯಾಟರ್ ಅನ್ನು ನಿಮ್ಮ ಕೈಯಿಂದ ಬಿಟ್ಟರೆ ಅದು ಕೆಳಗೆ ಬೀಳುವುದೋ ಅಥವಾ ಮೇಲಕ್ಕೆ ಹಾರುವುದೋ ಎಂಬ ಪ್ರಶ್ನೆ ಇಷ್ಟು ದಿನ ಚಾಲ್ತಿಯಲ್ಲಿತ್ತು. ನಾವು ತಯಾರಿಸಿರುವ ಜಲಜನಕದ ಆಯಂಟಿ ಮ್ಯಾಟರ್ ಎಲ್ಲ ಸಾಮಾನ್ಯ ಅಣುಗಳಂತೆ ಗುರುತ್ವಬಲಕ್ಕೆ ಸಿಲುಕಿ ಕೆಳಮುಖವಾಗಿ ಚಲಿಸಿದೆ. ಈ ಒಂದು ಸಣ್ಣ ಹೆಜ್ಜೆಯಿಂದ ನಾವು ಭವಿಷ್ಯದಲ್ಲಿ ಬಹುದೊಡ್ಡ ದಾಪುಗಾಲು ಹಾಕುವುದಕ್ಕೆ ಮುನ್ನುಡಿ ಬರೆದಿದ್ದೇವೆ'.
'ಸಿಇಆರ್‌ಎನ್'ನ ಈ ಶೋಧದಿಂದ ಗುರುತ್ವಬಲದ ನಿಯಮಗಳಿಗೆ ಆಯಂಟಿ ಮ್ಯಾಟರ್ ಒಳಪಡುವುದಿಲ್ಲ ಎಂಬ ವಾದ ಸುಳ್ಳಾಗಿದೆ. ನಮ್ಮ ನಕ್ಷತ್ರಪುಂಜದ ('ಮಿಲ್ಕೀವೇ') ಅಲ್ಲಲ್ಲಿ ಆಯಂಟಿ ಮ್ಯಾಟರ್‌ನ ಮೋಡಗಳಿವೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಅಷ್ಟು ದೂರದ ಜಾಗಕ್ಕೆ ತಲುಪುವ ತಂತ್ರಜ್ಞಾನವನ್ನು ಮನುಷ್ಯ ಕಂಡುಹಿಡಿದ ಮೇಲೆ ಅದನ್ನು ಸಂಗ್ರಹಿಸಿ ತರುವುದು ಈ ಸಂಶೋಧನೆಯಿಂದ ಸಾಧ್ಯವಾಗುತ್ತದೆ. ಇವರೆಗೂ ಇದ್ದ ವಾದದ ಪ್ರಕಾರ, ಆಯಂಟಿ ಮ್ಯಾಟರ್ ಅದರ ಮೋಡಗಳಿಂದ ಹೀರಿ ತರಲು ಸಾಧ್ಯವೇ ಇಲ್ಲ ಎನ್ನಲಾಗಿತ್ತು. ಗುರುತ್ವಬಲವನ್ನು ಕೃತಕವಾಗಿ ಸೃಷ್ಟಿಸಿ ಅಥವಾ ಅಯಸ್ಕಾಂತೀಯ ಶಕ್ತಿಯ ಮೂಲಕ ಆಯಂಟಿ ಮ್ಯಾಟರ್ ಅನ್ನು ಸೆರೆಹಿಡಿಯಬಹುದು ಎಂದು ಈ ಸಂಶೋಧನೆ ಹೇಳಿದೆ.
ಅಲ್ಲದೇ, ಆಲ್ಬರ್ಟ್ ಐನ್‌ಸ್ಟೀನ್ ಅವರ ಸಾಪೇಕ್ಷತಾ ಸಿದ್ಧಾಂತದ ಪ್ರಕಾರ, ಶಕ್ತಿಯು ಉತ್ಪಾದನೆ ಆಗಲು ಆಯಂಟಿ ಮ್ಯಾಟರ್ ಯಥಾವತ್ತಾಗಿ ಮ್ಯಾಟರ್‌ನಂತೆಯೇ ವರ್ತಿಸಬೇಕು. ಆಗ ಮಾತ್ರ ಮ್ಯಾಟರ್ ಮತ್ತು ಆಯಂಟಿ ಮ್ಯಾಟರ್ ಮಿಲನ, ಸ್ಫೋಟ ಸಾಧ್ಯ. ಇದಕ್ಕೆ ಬೇಕಾದ ಅತಿ ಪ್ರಮುಖವಾದ ಅಗತ್ಯವೇ ಗುರುತ್ವಬಲ. ಗುರುತ್ವಬಲದ ಪ್ರಭಾವಕ್ಕೆ ಆಯಂಟಿ ಮ್ಯಾಟರ್ ಒಳಗಾಗದೇ ಇದ್ದಲ್ಲಿ, ಶಕ್ತಿ ಉತ್ಪಾದನೆಯ ಪ್ರಶ್ನೆಯೇ ಬರುವುದಿಲ್ಲ ಎಂಬ ವಿಜ್ಞಾನಿಗಳ ವಾದ ಈಗ ಈ ಸಂಶೋಧನೆಯಿಂದ ಸುಳ್ಳಾಗಿರುವುದು ಭವಿಷ್ಯದಲ್ಲಿನ ಹಲವು ಸಂಶೋಧನೆಗಳಿಗೆ ಹೊಸ ದಾರಿ ಸಿಕ್ಕಂತಾಗಿದೆ.