ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅನಧೀಕೃತ ಹಾಗೂ ಸುಳ್ಳು ಅಪಾದನೆ ಮಾಡಿದ ಆರೋಪದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಅಲ್ಲದೆ ಪ್ರಧಾನಿ ಅವರನ್ನು ಅವಹೇಳನ ಮಾಡಲಾಗಿದೆ ಎನ್ನುವ ಆರೋಪದಲ್ಲಿ ಆಮ್ ಆದ್ಮಿ ಪಕ್ಷಕ್ಕೂ ಶೋಕಾಸ್ ನೋಟಿಸ್ ನಿಡಲಾಗಿದೆ.
ಮಧ್ಯಪ್ರದೇಶದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅನಧೀಕೃತ ಹಾಗೂ ಸುಳ್ಳು ಆಪಾದನೆ ಮಾಡಿದ್ದಾರೆ ಎಂದು ಬಿಜೆಪಿ ದೂರು ನೀಡಿತ್ತು. ಈ ಬಗ್ಗೆ ನವೆಂಬರ್ 16ರ ರಾತ್ರಿ 8ರ ಒಳಗೆ ಉತ್ತರ ನೀಡಬೇಕು ಎಂದು ಚುನಾವಣಾ ಆಯೋಗವು ನೋಟಿಸ್ ಜಾರಿ ಮಾಡಿದೆ.
ಆಮ್ ಆದ್ಮಿ ಪಕ್ಷಕ್ಕೂ ಅದೇ ದಿನದ ಒಳಗಾಗಿ ಉತ್ತರಿಸುವಂತೆ ಸೂಚಿಸಲಾಗಿದೆ.
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಬಿಜೆಪಿ ರಾಜ್ಯಸಭಾ ಸದಸ್ಯ ಅನಿಲ್ ಬಲೂನಿ, ಬಿಜೆಪಿ ನಾಯಕ ಓಂ ಪಟ್ನಾಯಕ್ ಅವರ ನಿಯೋಗ ನವೆಂಬರ್ 10ರಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು,
'ಎಕ್ಸ್ (ಟ್ವಿಟರ್)ನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹಾಗೂ ಅವಮಾನಕಾರಿ ಪೋಸ್ಟ್‌ಗಳನ್ನು ಮಾಡಲಾಗಿತ್ತು. ಆರೋಪಗಳು 'ಅಸ್ಪಷ್ಟ ಮತ್ತು ದುರುದ್ದೇಶಪೂರಿತವಾಗಿತ್ತು' ಎಂದು ಬಿಜೆಪಿ ದೂರು ನೀಡಿದ್ದಾಗಿ ಆಮ್ ಆದ್ಮಿ ಪಕ್ಷದ ವಿರುದ್ಧದ ದೂರಿನ ಬಗ್ಗೆ ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಉದ್ಯಮಿ ಗೌತಮ್ ಅವರಿಗೆ ಇರುವ ಸಂಬಂಧದ ಕುರಿತು ಎಎಪಿ ಪೋಸ್ಟ್ ಮಾಡಿತ್ತು ಎಂದು ಆಯೋಗ ಮಾಹಿತಿ ನೀಡಿದೆ.
ಪ್ರಸ್ತುತ ಆಪಾದಿತ ವಿಷಯವನ್ನು ಆಮ್ ಆದ್ಮಿ ಪಕ್ಷದ ಹ್ಯಾಂಡಲ್‌ನಿಂದ ಪೋಸ್ಟ್ ಮಾಡಲಾಗಿದೆ ಎಂದು ಕಂಡುಬಂದಿದೆ. ಎಎಪಿ ರಾಷ್ಟ್ರೀಯ ಪಕ್ಷವಾಗಿರುವುದರಿಂದ ಸಾರ್ವಜನಿಕವಾಗಿ ಅಂತಹ ವಿಷಯಗಳನ್ನು ಪ್ರಸ್ತಾಪಿಸುವ ಮೊದಲು ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂದಿರುವ ಚುನಾವಣಾ ಆಯೋಗವು, ಇದು ನೀತಿ ಸಂಹಿತೆಯ ಉಲ್ಲಂಘನೆ ಎಂದಿದೆ.