ಟೆಲ್ ಅವೀವ್: ಹಮಾಸ್ ಉಗ್ರ ಸಂಘಟನೆ ವಿರುದ್ಧ ಇಸ್ರೇಲ್ ಸೇನೆ ನಡೆಸುತ್ತಿರುವ ಕಾರ್ಯಾಚರಣೆ ನಿರ್ಣಾಯಕ ಹಂತದತ್ತ ಸಾಗಿದ್ದು, ಇಡೀ ಗಾಜಾ ನಗರವನ್ನು ಇಸ್ರೇಲ್ ಸೇನೆ ಸುತ್ತುವರೆದು ನೆಲದ ಕಾರ್ಯಾಚರಣೆ ಆರಂಭಿಸಿದೆ ಎಂದು ಹೇಳಲಾಗಿದೆ.
ಹಮಾಸ್-ನಿಯಂತ್ರಿತ ಗಾಜಾ ನಗರವನ್ನು ಇಸ್ರೇಲ್ ಸೇನೆ ಸಂಪೂರ್ಣವಾಗಿ ಸುತ್ತುವರೆದಿರುವುದಾಗಿ ಹೇಳಿಕೊಂಡಿದ್ದು, ಹಮಾಸ್ ಉಗ್ರರ ವಿರುದ್ಧದ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿರುವುದಾಗಿ ಹೇಳಿದೆ. ಇಸ್ರೇಲಿ ಸೈನಿಕರು ಭಯೋತ್ಪಾದಕ ಸಂಘಟನೆ ಹಮಾಸ್ (Hamas Terrorists) ನ ಕೇಂದ್ರ ತಾಣವಾದ ಗಾಜಾ ನಗರವನ್ನು ಸುತ್ತುವರಿಯುವುದನ್ನು ಪೂರ್ಣಗೊಳಿಸಿದೆ ಎಂದು ಇಸ್ರೇಲಿ ಮಿಲಿಟರಿ ವಕ್ತಾರ ಡೇನಿಯಲ್ ಹಗರಿ ಹೇಳಿದ್ದಾರೆ. "ಕದನ ವಿರಾಮದ ಪರಿಕಲ್ಪನೆಯು ಪ್ರಸ್ತುತ ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಮಾಸ್ ಉಗ್ರರನ್ನು (Hamas Terrorists) ಸಂಪೂರ್ಣವಾಗಿ ನಿರ್ನಾಮ ಮಾಡಬೇಕು ಎಂದು ಪಣ ತೊಟ್ಟಿರುವ ಇಸ್ರೇಲ್ ಸೇನೆಯು (Israel Palestine War) ಗಾಜಾ ನಗರದ ಮೇಲೆ ಬಿಗಿ ಹಿಡಿತ ಸಾಧಿಸುತ್ತಿದೆ. ಗಾಜಾ ನಗರದ ಮೇಲೆ ಪೂರ್ಣ ಪ್ರಮಾಣದ ದಾಳಿ ಮಾಡಲು ಗಡಿಯಲ್ಲಿ ನೂರಾರು ಯುದ್ಧ ಟ್ಯಾಂಕರ್‌ಗಳನ್ನು ನಿಯೋಜಿಸಿದ್ದು, ಯಾವಾಗ ಬೇಕಾದರೂ ದಾಳಿ ನಡೆಸಬಹುದು ಎನ್ನಲಾಗಿದೆ. ಇನ್ನು ಇದರ ಬೆನ್ನಲ್ಲೇ, ಗಾಜಾ ನಗರದಲ್ಲಿ ಮೊಬೈಲ್ ನೆಟ್‌ವರ್ಕ್, ಇಂಟರ್‌ನೆಟ್ ಸೇವೆಗಳನ್ನು (Communications Blackout) ಸ್ಥಗಿತಗೊಳಿಸಲಾಗಿದೆ. ಇದು ಈಗ ಗಾಜಾ ನಾಗರಿಕರು ಹಾಗೂ ಉಗ್ರರನ್ನು ಆತಂಕಕ್ಕೀಡು ಮಾಡಿದೆ ಎಂದು ತಿಳಿದುಬಂದಿದೆ.
ಮೊಬೈಲ್ ನೆಟ್‌ವರ್ಕ್, ಇಂಟರ್‌ನೆಟ್ ಸೇವೆ ಸ್ಥಗಿತ
ಗಾಜಾ ನಗರದ ಬೆಳವಣಿಗೆಗಳು ಹೊರ ಜಗತ್ತಿಗೆ ಗೊತ್ತಾಗಬಾರದು ಎಂಬ ಕಾರಣಕ್ಕಾಗಿ ಇಸ್ರೇಲ್ ಸೇನೆಯೇ ನಗರದಲ್ಲಿ ಇಂಟರ್‌ನೆಟ್, ಮೊಬೈಲ್ ನೆಟ್‌ವರ್ಕ್ ಸೇರಿ ಹಲವು ರೀತಿಯ ಸಂಪರ್ಕ ಸೇವೆಗಳನ್ನು ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ. ಅದರಲ್ಲೂ, ಐದು ದಿನಗಳಲ್ಲಿ ಎರಡನೇ ಬಾರಿ ಈ ರೀತಿಯಾಗುತ್ತಿದ್ದು, ಇಸ್ರೇಲ್ ಸೈನಿಕರು, ಯುದ್ಧ ಟ್ಯಾಂಕರ್‌ಗಳು ಇಡೀ ನಗರವನ್ನು ವಶಪಡಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಮತ್ತೊಂದೆಡೆ, ಹಮಾಸ್ ಉಗ್ರರು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿರುವ ಇಸ್ರೇಲ್ ನಾಗರಿಕರನ್ನು ರಕ್ಷಿಸಲು ಕೂಡ ಹೀಗೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇತ್ತ ಇಸ್ರೇಲ್ ನಡೆಸುತ್ತಿರುವ ಸತತ ದಾಳಿಯಿಂದಾಗಿ ಗಾಜಾ ನಗರದಲ್ಲಿ ಇದುವರೆಗೆ 8,796 ಜನ ಹತರಾಗಿದ್ದಾರೆ ಎಂದು ತಿಳಿದುಬಂದಿದೆ. ಇಸ್ರೇಲ್ ದಾಳಿಗೆ ಇದುವರೆಗೆ 3,648 ಮಕ್ಕಳು, 2,290 ಮಹಿಳೆಯರು ಸೇರಿ ಒಟ್ಟು 8,796 ಮಂದಿ ಬಲಿಯಾಗಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. 22 ಸಾವಿರಕ್ಕೂ ಅಧಿಕ ಜನ ಗಾಯಗೊಂಡಿದ್ದು, ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಇನ್ನೂ 2 ಸಾವಿರಕ್ಕೂ ಅಧಿಕ ನಾಗರಿಕರು ಸಿಲುಕಿದ್ದಾರೆ. ವೆಸ್ಟ್ ಬ್ಯಾಂಕ್ ಪೂರ್ತಿ ಇಸ್ರೇಲ್ ವಶವಾಗಿದ್ದು, ಅಲ್ಲೂ ನೂರಾರು ಜನ ಹತರಾಗಿದ್ದಾರೆ ಎಂದು ಮಾಹಿತಿ ನೀಡಿದೆ.
ಇಸ್ರೇಲಿ ಸೈನಿಕರನ್ನು ಬ್ಯಾಗ್ ನಲ್ಲಿ ವಾಪಸ್ ಕಳುಹಿಸುತ್ತೇವೆ
ಇಸ್ರೇಲಿ ಸೇನೆ ಗಾಜಾನಗರವನ್ನು ಸಂಪೂರ್ಣವಾಗಿ ಸುತ್ತುವರೆದಿರುವ ಕುರಿತು ಪ್ರತಿಕ್ರಿಯಿಸಿರುವ ಹಮಾಸ್ ಸಂಘಟನೆ, ಭಯ ಬೇಡ.. ಗಾಜಾ ಪ್ರವೇಶಿಸಿರುವ ಇಸ್ರೇಲಿ ಸೈನಿಕರನ್ನು ನಾವು ಶವ ಸಾಗಾಣಿಕಾ ಬ್ಯಾಗ್ ಗಳಲ್ಲಿ ತುಂಬಿ ಇಸ್ರೇಲ್ ಗೆ ವಾಪಸ್ ಕಳುಹಿಸುತ್ತೇವೆ ಎಂದು ಹೇಳಿದೆ. ಅಲ್ಲದೆ ಇಸ್ರೇಲ್ ಮಾಡುತ್ತಿರುವ ಸತತ ದಾಳಿಗಳಿಂದ ಕಂಗೆಟ್ಟುಹೋಗಿರುವ ಹಮಾಸ್ ಉಗ್ರರು ಇಸ್ರೇಲ್ ಮೇಲೆ ಹಲವು ಆರೋಪ ಮಾಡಿದ್ದು, ಇಸ್ರೇಲ್ ದಾಳಿ ಮುಂದುವರಿಸಿದ್ದು, ಬುಧವಾರ 12ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, ಇಸ್ರೇಲ್‌ಗೆ ತನ್ನ ದೇಶದ ಒತ್ತೆಯಾಳುಗಳ ರಕ್ಷಣೆಗಿಂತ, ಪ್ಯಾಲೆಸ್ತೀನ್ ನಾಗರಿಕರನ್ನು ಹತ್ಯೆ ಮಾಡುವುದು ಪ್ರಮುಖ ಉದ್ದೇಶವಾಗಿದೆ ಎಂದು ಆರೋಪಿಸಿದೆ. ಆದಾಗ್ಯೂ, ವಿಶ್ವಸಂಸ್ಥೆ ನಿರ್ಣಯವನ್ನೇ ಲೆಕ್ಕಕ್ಕೆ ತೆಗೆದುಕೊಳ್ಳದ ಇಸ್ರೇಲ್ ಸೇನೆಯು ದಾಳಿ ಮುಂದುವರಿಸಿದೆ. ಅವರಿಗೆ ನಾವು ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದೆ.
ಉತ್ತರ ಗಾಜಾದಲ್ಲಿ ಹೋರಾಟ ಮುಂದುವರಿದಂತೆ, ನೂರಾರು ಗಾಯಗೊಂಡ ವಿದೇಶಿಯರು ಮತ್ತು ಉಭಯ ಪ್ರಜೆಗಳು ರಫಾ ಬಾರ್ಡರ್ ಕ್ರಾಸಿಂಗ್ ಮೂಲಕ ಈಜಿಪ್ಟ್‌ಗೆ ಸ್ಥಳಾಂತರವಾಗುತ್ತಿದ್ದಾರೆ. ಈಜಿಪ್ಟ್‌ನ ಆರೋಗ್ಯ ಸಚಿವಾಲಯವು 21 ಗಾಯಗೊಂಡ ಪ್ಯಾಲೆಸ್ಟೀನಿಯನ್ನರು ಮತ್ತು "72 ಮಕ್ಕಳು ಸೇರಿದಂತೆ 344 ವಿದೇಶಿ ಪ್ರಜೆಗಳು" ಎರಡು ದಿನದಲ್ಲಿ ಗಡಿ ಬಂದು ನಿರಾಶ್ರಿತ ಶಿಬಿರವನ್ನು ಸೇರಿದ್ದಾರೆ ಎಂದು ಹೇಳಿದೆ.
ಅಕ್ಟೋಬರ್ 7 ರ ದಾಳಿಯ ಸಮಯದಲ್ಲಿ ಹಮಾಸ್ ವಶಪಡಿಸಿಕೊಂಡ ನಾಗರಿಕ ಮತ್ತು ಮಿಲಿಟರಿಯ ಸುಮಾರು 240 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಇಸ್ರೇಲಿ ಸೇನೆಯು ಒತ್ತಾಯಿಸುತ್ತಿದೆ. ಒತ್ತೆಯಾಳುಗಳನ್ನು ಹುಡುಕುವ ಪ್ರಯತ್ನದಲ್ಲಿ ಅಮೆರಿಕ ಗಾಜಾದ ಮೇಲೆ ಡ್ರೋನ್‌ಗಳನ್ನು ಹಾರಿಸುತ್ತಿದೆ.