ಕೋಟಾ: ರಾಜಸ್ಥಾನದ ಬುಂದಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಧ್ಯಪ್ರದೇಶದ ಒಂದೇ ಕುಟುಂಬದ ನಾಲ್ವರು ಭಾನುವಾರ ಮುಂಜಾನೆ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತರು ಪುಷ್ಕರ್‌ಗೆ ತೆರಳುತ್ತಿದ್ದಾಗ ಹಿಂದೋಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.
ಮೃತರನ್ನು ಮಧ್ಯಪ್ರದೇಶದ ಅಗರ್-ಮಾಲ್ವಾ ಜಿಲ್ಲೆಯ ಗಂಗುಖೇಡಿ ಗ್ರಾಮದ ನಿವಾಸಿಗಳಾದ ದೇವಿ ಸಿಂಗ್ (50), ಅವರ ಪತ್ನಿ ಮಾಂಖೋರ್ ಕನ್ವರ್ (45), ಅವರ ಸಹೋದರ ರಾಜಾರಾಂ (40) ಮತ್ತು ಸೋದರಳಿಯ ಜಿತೇಂದ್ರ (20) ಎಂದು ಗುರುತಿಸಲಾಗಿದೆ.
12.30 ರ ಸುಮಾರಿಗೆ ನಾಲ್ವರು ಪ್ರಯಾಣಿಸುತ್ತಿದ್ದ ಎಸ್‌ಯುವಿ ಹಿಂದೋಲಿ ಪಟ್ಟಣದ ಬಳಿ ಹಿಂದಿನಿಂದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಎಸ್‌ಯುವಿ ಬಹುಶಃ ವೇಗವಾಗಿ ಚಲಿಸುತ್ತಿತ್ತು. ಮುಂದೆ ಸಾಗುತ್ತಿದ್ದ ಟ್ರಕ್ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದರಿಂದಾಗಿ ಕಾರು ಅದಕ್ಕೆ ಡಿಕ್ಕಿಯಾಗಿದೆ ಎಂದು ಹಿಂದೋಳಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಮನೋಜ್ ಸಿಕರ್ವಾಲ್ ತಿಳಿಸಿದ್ದಾರೆ.
ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಭಾನುವಾರ ಬೆಳಗ್ಗೆ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟ್ರಕ್ ಚಾಲಕ ವಾಹನವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಆತನನ್ನು ಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಸಿಕರ್ವಾಲ್ ಹೇಳಿದರು.