ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‍ಒ) ಅಧ್ಯಯನದ ಪ್ರಕಾರ, ಸೂರ್ಯನಿಗೆ ತೆರೆದುಕೊಳ್ಳುವ ಮೂವರಲ್ಲಿ ಒಬ್ಬ ಕೆಲಸಗಾರನಿಗೆ ಚರ್ಮದ ಕ್ಯಾನ್ಸರ್ ಬರುವ ಅಪಾಯವಿದೆ ಎನ್ನಲಾಗಿದೆ.
ಡಬ್ಲ್ಯುಎಚ್‍ಒ ಮತ್ತು ಇಂಟರ್‍ನ್ಯಾಶನಲ್ ಲೇಬರ್ ಆರ್ಗನೈಸೇಶನ್‍ನ ಸಂಶೋಧಕರ ತಂಡ ನಡೆಸಿದ ಅಧ್ಯಯನದಲ್ಲಿ ಈ ಶೋಧನೆಗಳು ಹೊರಬಿದ್ದಿದೆ.
ಚರ್ಮದ ಕಾಯಿಲೆಯಿಂದ ಸಾಯುವವರಲ್ಲಿ ಹೆಚ್ಚಿನವರು ಬಿಸಿಲಿನಲ್ಲಿ ಕೆಲಸ ಮಾಡುವವರು. 2019 ರಲ್ಲಿ, 183 ದೇಶಗಳಲ್ಲಿ 19,000 ಜನರು ಚರ್ಮದ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ. ಅವರೆಲ್ಲರೂ ಸೂರ್ಯನ ಬೆಳಕಿನಲ್ಲಿ ಕೆಲಸ ಮಾಡುತ್ತಿದ್ದರು. ಅವರಲ್ಲಿ 65 ಪ್ರತಿಶತ ಪುರುಷರು ಎಂದು ಅಂದಾಜಿಸಲಾಗಿದೆ. 22 ದೇಶಗಳ 2.9 ಲಕ್ಷ ಜನರ ಮೇಲೆ ಈ ಅಧ್ಯಯನ ನಡೆಸಲಾಗಿದೆ.
ಪ್ರತಿ ವರ್ಷ ಸಾವಿನ ಪ್ರಮಾಣ ಹೆಚ್ಚುತ್ತಿದೆ. 2000 ರಲ್ಲಿ 10,088 ಸಾವುಗಳು ಸಂಭವಿಸಿವೆ, 2019 ರ ವೇಳೆಗೆ ದ್ವಿಗುಣಗೊಂಡಿದೆ. ವಿಶ್ವದ ಎಲ್ಲಾ ಉದ್ಯೋಗಿಗಳಲ್ಲಿ 28 ಪ್ರತಿಶತ ಜನರು ಹೊರ ಪ್ರದೇಶ ಅಥವಾ ಅತಿ ಸೂರ್ಯನ ಬೆಳಕಿಗೆ ಮೈಯೊಡ್ಡಿ ಕೆಲಸ ಮಾಡುವವರು.
ಬಿಸಿಲಿನಲ್ಲಿ ಕೆಲಸ ಮಾಡುವವರನ್ನು ರಕ್ಷಿಸಲು ಯೋಜನೆಗಳು ಅಥವಾ ಕ್ರಮಗಳ ಅವಶ್ಯಕತೆಯಿದೆ ಎಂದು ಡಬ್ಲ್ಯುಎಚ್‍ಒ ಹೇಳಿದೆ. ಚರ್ಮದ ಕ್ಯಾನ್ಸರ್ ಕಾಣಿಸಲು ವರ್ಷಗಳನ್ನು ತೆಗೆದುಕೊಳ್ಳಬಹುದು. ಆದ್ದರಿಂದ, ಒಂದು ದಿನ ಸೂರ್ಯನ ಬೆಳಕಿನಿಂದ ದೂರವಿದ್ದರೆ, ಅದರಿಂದ ಪಾರಾಗಲು ಸಾಧ್ಯವಿಲ್ಲ. ಬದಲಾಗಿ, ಮೊದಲಿನಿಂದಲೂ ಗಮನ ಹರಿಸಬೇಕು ಎಂದು ಡಬ್ಲ್ಯುಎಚ್‍ಒ ಹೇಳಿದೆ.
ಇತ್ತೀಚಿನ ತಾಪಮಾನ ಬದಲಾವಣೆ, ಪರಿಸರ ವ್ಯತಿರಿಕ್ತತೆಯಿಂದ ಈ ಸಮಸ್ಯೆಗಳು ಎದುರಾಗಿರುವುದನ್ನು ಅಧ್ಯಯನ ಬೊಟ್ಟುಮಾಡಿದೆ.