ಮಂಗಳೂರು: ಹುರಿದ ಅಡಿಕೆ ರೂಪದಲ್ಲಿ ಕಸ್ಟಮ್ಸ್ ಸುಂಕ ತಪ್ಪಿಸಿಕೊಂಡು ಅವ್ಯಾಹತವಾಗಿ ವಿದೇಶ ಅಡಿಕೆ ಭಾರತಕ್ಕೆ ಬರುತ್ತಿರುವುದು ರಾಜ್ಯದ ಅಡಿಕೆ ವಹಿವಾಟು ಸಂಸ್ಥೆಗಳು ಹಾಗೂ ಬೆಳೆಗಾರರ ನಿದ್ದೆಗೆಡಿಸಿದೆ.
'ತಿಂಗಳ ಈಚೆಗೆ ಸುಮಾರು 20 ಕಂಟೇನರ್ ಅಡಿಕೆ ವಿದೇಶದಿಂದ ಭಾರತಕ್ಕೆ ಬಂದಿದ್ದು, ಪ್ರತಿ ಕಂಟೇನರ್‌ನಲ್ಲಿ 20ರಿಂದ 24 ಟನ್ ಅಡಿಕೆ ಇರಬಹುದೆಂದು ಅಂದಾಜಿಸಲಾಗಿದೆ.
'ವಿದೇಶದಿಂದ ಬಂದಿರುವ ಅಡಿಕೆಯ ಮಾದರಿಗಳ ಮೇಲೆ ಮಂಗಳೂರಿನ ಸಂಶೋಧನಾ ಸಂಸ್ಥೆಯೊಂದು ಅಧ್ಯಯನ ನಡೆಸಿದೆ. ಸ್ಥಳೀಯ ರೈತರು ತಯಾರಿಸುವ ಕೆಂಪಡಿಕೆಗೆ ಹೋಲುವ ಇವು ಸ್ವಲ್ಪ ಕಂದುಬಣ್ಣದಲ್ಲಿದ್ದು, ನೈಜ ಅಡಿಕೆಗಿಂತ ಭಿನ್ನವಾಗಿವೆ. ಅಡಿಕೆ ಗುಣಮಟ್ಟ ನಿಗದಿಪಡಿಸಿದ (ಬಿಐಎಸ್- ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಮಾನದಂಡಕ್ಕೆ ಅನುಗುಣವಾಗಿಲ್ಲ. ಅಲ್ಲದೆ, ಇವು ತುಸು ಹೊಗೆಯ ವಾಸನೆ ಹೊಂದಿವೆ. ಇದು ಇಂಡೊನೇಷ್ಯಾ ಅಡಿಕೆ ಆಗಿರುವ ಸಾಧ್ಯತೆ ಇದ್ದು, ಮೇಲ್ನೋಟಕ್ಕೆ ಸ್ಥಳೀಯ ಅಡಿಕೆಯನ್ನು ಹೋಲುತ್ತದೆ. ಆದರೆ, ಕಳಪೆ ಗುಣಮಟ್ಟದ ಈ ಅಡಿಕೆಗಳಲ್ಲಿ ಶೇ 33ರಷ್ಟು ಸೋಂಕು ತಗುಲಿದಂತಿವೆ ಎಂದು ಆ ವರದಿಯಲ್ಲಿ ತಿಳಿಸಲಾಗಿದೆ' ಎಂದು ಅವರು ವಿವರಿಸಿದರು.
'ವಿದೇಶಿ ಅಡಿಕೆ ಅವ್ಯಾಹತವಾಗಿ ದೇಸಿ ಮಾರುಕಟ್ಟೆಗೆ ಬರುತ್ತಿದ್ದು, ಕೆಲವು ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿವೆ. ತೆರಿಗೆರಹಿತ ವಸ್ತುಗಳ ಹೆಸರಿನಲ್ಲಿ, ಒಣಹಣ್ಣುಗಳ ಹೆಸರಿನಲ್ಲಿ ವಿಮಾನಗಳ ಮೂಲಕವೂ ಅಡಿಕೆ ಬರುತ್ತಿದೆ. ಇಂಡೊನೇಷ್ಯಾ ಅಡಿಕೆಯು ಶ್ರೀಲಂಕಾ ಗಡಿ ಮೂಲಕ ಭಾರತಕ್ಕೆ ಬರುತ್ತದೆ. ಬೇರೆ ದೇಶಗಳಿಂದ ಅಡಿಕೆ ನುಸುಳುತ್ತಿದ್ದು, ವಾರದ ಈಚೆಗೆ ತಮಿಳುನಾಡಿನ ಬಂದರಿಗೆ ಬಂದ ವಿದೇಶಿ ಅಡಿಕೆಯನ್ನು ಕಸ್ಟಮ್ಸ್ ಇಲಾಖೆ ವಶಪಡಿಸಿಡಿಕೊಂಡಿದೆ' ಎನ್ನುತ್ತಾರೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ.
'ಸ್ಥಳೀಯ ಮಾರುಕಟ್ಟೆಗಳಲ್ಲಿ ಈಗಾಗಲೇ ವಿದೇಶ ಅಡಿಕೆ ತಲ್ಲಣ ಸೃಷ್ಟಿಸಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ, ಸಾಗರ, ಶಿವಮೊಗ್ಗ ಭಾಗಗಳಲ್ಲಿ ಕೆಂಪಡಿಕೆ ಹೆಚ್ಚು ತಯಾರಾಗುತ್ತದೆ. ಕೆಂಪಡಿಕೆಯೊಂದಿಗೆ ಕಳಪೆ ಗುಣಮಟ್ಟದ ಹುರಿ ಅಡಿಕೆ ಮಿಶ್ರಣ ಮಾಡಿ ಕಾಳದಂಧೆಕೋರರು ಮಾರಾಟಕ್ಕಿಳಿದರೆ, ನಮ್ಮ ಅಡಿಕೆ ದರವೂ ಕುಸಿಯುವ ಅಪಾಯ ಇದೆ. ಕ್ವಿಂಟಲ್‌ವೊಂದಕ್ಕೆ ಗರಿಷ್ಠ ₹52ಸಾವಿರದವರೆಗೆ ಇದ್ದ ಕೆಂಪಡಿಕೆ ದರ ಈಗ ₹45ಸಾವಿರಕ್ಕೆ ಕುಸಿದಿದೆ. ಹೀಗಾಗಿ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ನಿಯೋಗದಲ್ಲಿ ತೆರಳಿ ಕೇಂದ್ರ ಸರ್ಕಾರದ ಪ್ರಮುಖರನ್ನು ಸದ್ಯದಲ್ಲಿ ಭೇಟಿ ಮಾಡಲಾಗುವುದು' ಎಂದು ಅಡಿಕೆ ವಹಿವಾಟು ಸಹಕಾರಿ ಸಂಸ್ಥೆಯಾಗಿರುವ ಶಿರಸಿ ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಪ್ರತಿಕ್ರಿಯಿಸಿದರು.
-ಅಡಿಕೆ ಅಕ್ರಮ ನುಸುಳುವಿಕೆ ತಡೆಯಲು ಕೇಂದ್ರ ವಾಣಿಜ್ಯ ಸಚಿವಾಲಯ ಮಧ್ಯ ಪ್ರವೇಶಿಸಿ ದೇಶದ ಅಡಿಕೆ ಬೆಳೆಗಾರರ ಹಿತ ಕಾಪಾಡಬೇಕು.ಪ್ರಧಾನಿಗೆ ಕ್ಯಾಂಪ್ಕೊದಿಂದ ಪತ್ರ
ನೆಲ ಜಲ ವಾಯು ಮಾರ್ಗಗಳ ಮೂಲಕ ವಿದೇಶದ ಕಳಪೆ ಅಡಿಕೆ ಭಾರತಕ್ಕೆ ಬರುತ್ತಿದೆ. ಗಡಿ ಪ್ರದೇಶದಿಂದ ವಿಮಾನಗಳ ಮೂಲಕ ಬರುವ ಅಡಿಕೆಯನ್ನು ಇಂಫಾಲ್ ದಿಮಾಪುರ್ ಕೊಲ್ಕತ್ತಾ ಮತ್ತು ಅಗರ್ತಲಾ ವಿಮಾನ ನಿಲ್ದಾಣಗಳ ಲೋಡಿಂಗ್ ಪಾಯಿಂಟ್‌ಗೆ ಕಳುಹಿಸಲಾಗುತ್ತದೆ. ಬೆಂಗಳೂರು ಹೈದರಾಬಾದ್ ನಾಗ್ಪುರ ಮತ್ತು ಅಹಮದಾಬಾದ್‌ನಲ್ಲಿ ಕಾರ್ಗೊ ಏಜೆಂಟರಿಗೆ ಈ ಅಡಿಕೆ ತಲುಪುತ್ತದೆ. ಆಹಾರ ವಸ್ತುಗಳ ಹೆಸರಿನಲ್ಲಿ ಬಂದರುಗಳ ಮೂಲಕವೂ ಅಡಿಕೆ ಬರುತ್ತಿದೆ. ಪ್ರತಿದಿನ 10 ಟನ್‌ಗಳಷ್ಟು ಸರಕು ಭಾರತಕ್ಕೆ ಪ್ರವೇಶಿಸುತ್ತಿದೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ಕುಮಾರ್ ಕೊಡ್ಗಿ ತಿಳಿಸಿದರು.