ನವದೆಹಲಿ: ಸುಪ್ರೀಂ ಕೋರ್ಟ್ 'ಜನರ ನ್ಯಾಯಾಲಯ'ದಂತೆ ಕೆಲಸ ಮಾಡುತ್ತದೆ. ನಾಗರಿಕರು ನ್ಯಾಯಾಲಯದ ಮೆಟ್ಟಿಲೇರಲು ಭಯ ಪಡಬಾರದು ಅಥವಾ ಅದನ್ನು ಕೊನೆಯ ಯತ್ನದಂತೆಯೂ ಪರಿಗಣಿಸಬಾರದು ಎಂದು ಮುಖ್ಯ ನ್ಯಾಯಮುರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್ ಅವರು ಭಾನುವಾರ ಹೇಳಿದರು.
ಸಂವಿಧಾನ ದಿನದ ಅಂಗವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಸ್ಥಾಪಿತ ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಪ್ರಕ್ರಿಯೆಗಳ ಮುಖಾಂತರ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಸಂವಿಧಾನ ನಮಗೆ ಅವಕಾಶ ನೀಡಿದೆ. ಸ್ಥಾಪಿತ ನೀತಿಗಳು ಮತ್ತು ಪ್ರಕ್ರಿಯೆಗಳ ಮೂಲಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಲು ನ್ಯಾಯಾಂಗ ವ್ಯವಸ್ಥೆಯು ಸಹಾಯ ಮಾಡುತ್ತದೆ' ಎಂದು ಹೇಳಿದರು.
'ದೇಶದ ಪ್ರತಿಯೊಂದು ನ್ಯಾಯಾಲಯದಲ್ಲಿರುವ ಪ್ರತಿ ಪ್ರಕರಣಗಳೂ ಸಾಂವಿಧಾನಿಕ ಸರ್ಕಾರದ ಭಾಗವೇ ಆಗಿವೆ' ಎಂದು ಅಭಿಪ್ರಾಯಪಟ್ಟರು.
'ಕಳೆದ ಏಳು ದಶಕದಲ್ಲಿ ಸುಪ್ರೀಂ ಕೋರ್ಟ್ 'ಜನರ ನ್ಯಾಯಾಲಯ'ವಾಗಿ ಕೆಲಸ ಮಾಡಿದೆ. ಸಾವಿರಾರು ಜನರು ನ್ಯಾಯ ಪಡೆಯುವ ನಂಬಿಕೆಯಿಂದ ಕೋರ್ಟ್ ಕದ ತಟ್ಟಿದ್ದಾರೆ. ಈ ಪ್ರಕರಣಗಳು ಸುಪ್ರೀಂ ಕೋರ್ಟ್ ಮೇಲೆ ಜನರು ಇರಿಸಿರುವ ನಂಬಿಕೆ ಮತ್ತು ನ್ಯಾಯಾಲಯದ ಬದ್ಧತೆಯ ಪ್ರತೀಕ' ಎಂದು ಹೇಳಿದರು.
ಅಖಿಲ ಭಾರತ ನ್ಯಾಯಾಂಗ ಸೇವೆಯ ಅಗತ್ಯವಿದೆ:
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, 'ನ್ಯಾಯಾಂಗ ವ್ಯವಸ್ಥೆಗೆ ಪ್ರತಿಭಾನ್ವಿತರನ್ನು ಆಯ್ಕೆ ಮಾಡಲು ಅಖಿಲ ಭಾರತ ನ್ಯಾಯಾಂಗ ಸೇವೆ ರಚಿಸುವ ಅಗತ್ಯವಿದೆ' ಎಂದು ಅಭಿಪ್ರಾಯಪಟ್ಟರು.
'ನ್ಯಾಯ ಅರಸಿ ಬರುವ ಜನರಿಗೆ 'ವೆಚ್ಚ' ಮತ್ತು 'ಭಾಷೆ'ಯೇ ಅಡೆತಡೆಯಾಗಿದೆ. ಹೀಗಾಗಿ ಒಟ್ಟಾರೆ ವ್ಯವಸ್ಥೆಯನ್ನೇ ಜನ ಕೇಂದ್ರಿತವನ್ನಾಗಿಸಬೇಕು' ಎಂದು ಸಲಹೆ ನೀಡಿದರು.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ ಮತ್ತು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮತ್ತಿತರರು ಭಾಗಿಯಾಗಿದ್ದರು.
ಅಂಬೇಡ್ಕರ್ ಪ್ರತಿಮೆ ಅನಾವರಣ
ಸುಪ್ರೀಂ ಕೋರ್ಟ್ ಆವರಣದಲ್ಲಿ ಸ್ಥಾಪಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ಅನಾವರಣ ಮಾಡಿದರು. ಸಿಜೆಐ ಚಂದ್ರಚೂಡ್ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸಂವಿಧಾನ ಶಿಲ್ಪಿಯ ಏಳು ಅಡಿ ಎತ್ತರದ ಪ್ರತಿಮೆಗೆ ಗೌರವ ನಮನ ಸಲ್ಲಿಸಿದರು. ಇದಕ್ಕೂ ಮುನ್ನ ಸಿಜೆಐ ಚಂದ್ರಚೂಡ್ ಮತ್ತು ಮುರ್ಮು ಅವರು ಆವರಣದಲ್ಲಿ ಸಸಿ ನೆಟ್ಟರು.