ಬ್ಯಾಂಕಾಕ್ (PTI): 'ಹಿಂದೂ ಸಮಾಜದ ಧ್ವನಿ ಇನ್ನಷ್ಟು ಸ್ಪಷ್ಟ ಹಾಗೂ ಗಟ್ಟಿಯಾಗಿ ಮೊಳಗಲು ವಿವಿಧ ರಾಷ್ಟ್ರಗಳಲ್ಲಿರುವ, ಹಿಂದೂ ಸಂಘಟನೆಗಳ ನಡುವೆ ಉತ್ತಮ ಸಮನ್ವಯ ಈ ಹೊತ್ತಿನ ಅಗತ್ಯವಾಗಿದೆ' ಎಂದು ಆರ್‌ಎಸ್‌ಎಸ್‌ನ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಪ್ರತಿಪಾದಿಸಿದ್ದಾರೆ.
ಬ್ಯಾಂಕಾಕ್ (PTI): 'ಹಿಂದೂ ಸಮಾಜದ ಧ್ವನಿ ಇನ್ನಷ್ಟು ಸ್ಪಷ್ಟ ಹಾಗೂ ಗಟ್ಟಿಯಾಗಿ ಮೊಳಗಲು ವಿವಿಧ ರಾಷ್ಟ್ರಗಳಲ್ಲಿರುವ, ಹಿಂದೂ ಸಂಘಟನೆಗಳ ನಡುವೆ ಉತ್ತಮ ಸಮನ್ವಯ ಈ ಹೊತ್ತಿನ ಅಗತ್ಯವಾಗಿದೆ' ಎಂದು ಆರ್‌ಎಸ್‌ಎಸ್‌ನ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಪ್ರತಿಪಾದಿಸಿದ್ದಾರೆ.
ಶುಕ್ರವಾರ ಇಲ್ಲಿ ನಡೆದ ವಿಶ್ವ ಹಿಂದೂ ಸಮ್ಮೇಳನದಲ್ಲಿ ಮಾತನಾಡಿದ ಅವರು, 'ಸಂಘಟನೆಗಳಲ್ಲಿನ ವೈವಿಧ್ಯದಿಂದಾಗಿ ವಿವಿಧ ದೇಶಗಳಲ್ಲಿ ಹಿಂದೂಗಳಲ್ಲಿ ಒಗ್ಗಟ್ಟು ಇಲ್ಲವಾಗಿದೆ. ಸಮಾಜದ ಮುಂದಿನ ಸವಾಲುಗಳನ್ನು ಎದುರಿಸಲು ಜಾಗತಿಕವಾಗಿ ಎಲ್ಲ ಹಿಂದೂ ಸಂಘಟನೆಗಳನ್ನು ಬಲಪಡಿಸುವುದು ಅಗತ್ಯ' ಎಂದು ಹೇಳಿದರು.
'ಭಾಷೆ, ವರ್ಗ, ಜಾತಿ, ಉಪ ಜಾತಿ, ಗುರುಗಳ ಹೆಸರಿನಲ್ಲಿ ವಿಶ್ವದ ವಿವಿಧೆಡೆ ಹಿಂದೂಗಳ ಹಲವು ಸಂಸ್ಥೆಗಳು, ಸಂಘಟನೆಗಳು, ವೇದಿಕೆಗಳು ರಚನೆಯಾಗಿವೆ. ಎಲ್ಲವೂ ಸಂಘಟನೆಗಳಲ್ಲಿ ಕಾರ್ಯನಿರತವಾಗಿವೆ. ಆದರೆ, ಈ ವೈವಿಧ್ಯದ ನಡುವೆ ಹಿಂದುತ್ವ ಕಾಣೆಯಾಗಿದೆ. ಆದರೆ, ಈ ಸಂಘಟನೆಗಳು ಮುಖ್ಯ ಉದ್ದೇಶವನ್ನೇ ಮರೆಯಬಾರದು. ಹಲವು ಕಡೆ ಸಂಘಟನೆಗಳಲ್ಲಿನ ವೈವಿಧ್ಯವೇ ಒಗ್ಗಟ್ಟು ಮೂಡದಿರುವುದಕ್ಕೂ ಕಾರಣವಾಗಿದೆ' ಎಂದು ಹೊಸಬಾಳೆ ಹೇಳಿದರು.
ಮತಾಂತರ, ಹಿಂದೂಗಳ ಮಾನವಹಕ್ಕುಗಳ ಉಲ್ಲಂಘನೆ, ಪಾಶ್ಚಿಮಾತ್ಯ ವಿಶ್ವವಿದ್ಯಾಲಯಗಳಲ್ಲಿ ಭಾರತೀಯ ಭಾಷೆಗಳು ಮತ್ತು ಹಿಂದೂ ಅಧ್ಯಯನ ಪೀಠ ಇಲ್ಲದಿರುವುದು ಸಮಾಜದ ಮುಂದಿರುವ ಕೆಲ ಸವಾಲುಗಳಾಗಿವೆ. ಉತ್ತಮ ಸಂಘಟನೆಯಿಂದಲೇ ಇವುಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.
ಇದಕ್ಕೂ ಮೊದಲು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಅವರು, ಭೌತವಾದ, ಕಮ್ಯುನಿಸ್ಟ್‌ವಾದ ಮತ್ತು ಬಂಡವಾಳವಾದಗಳ ಜೊತೆಗಿನ ಪ್ರಯೋಗದಿಂದ ಮುಗ್ಗರಿಸಿರುವ ಜಗತ್ತಿಗೆ ಸಂತೃಪ್ತಿ ಮತ್ತು ಸಂತೋಷದ ಹಾದಿಯನ್ನು ಭಾರತವು ತೋರಲಿದೆ ಎಂದರು.
ನಾಲ್ಕು ವರ್ಷಗಳಿಗೆ ಒಮ್ಮೆ ನಡೆಯುವ ಈ ಸಮ್ಮೇಳನಕ್ಕೆ ಶಂಖ ಊದುವ ಮೂಲಕ ವಿಶ್ವಹಿಂದೂ ಸಂಘಟನೆಯ ಜಾಗತಿಕ ಅಧ್ಯಕ್ಷ ಸ್ವಾಮಿ ವಿಜ್ಞಾನಾನಂದ ಶುಕ್ರವಾರ ಚಾಲನೆ ನೀಡಿದರು. ಮೂರು ದಿನ ಸಮ್ಮೇಳನ ನಡೆಯಲಿದೆ, 60 ದೇಶಗಳ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ.