ಕುಂಬಳೆ: ಪಂಚಾಯತಿ ಕಛೇರಿ,ಕೃಷಿಭವನ, ಅಂಛೆ ಕಚೇರಿ ಮುಂತಾದ ಪ್ರಮುಖ ಕೇಂದ್ರಗಳನ್ನು ಒಳಗೊಂಡಿರುವ ಪ್ರದೇಶವಾದ ಪುತ್ತಿಗೆಯಲ್ಲಿ ಸೀತಾಂಗೋಳಿ ಭಾಗಕ್ಕೆ ದಿನಂಪ್ರತಿ ತೆರಳುರುವ ಜನರ ಪರದಾಟವನ್ನು ಗಮನಿಸಿ ಬಿಜೆಪಿ ಪುತ್ತಿಗೆ ಪಂಚಾಯತಿ ಜನಪ್ರತಿನಿಧಿಗಳು ಸುಸಜ್ಜಿತವಾದ ಬಸ್ಸು ತಂಗುದಾಣ ನಿರ್ಮಾಣಕ್ಕಾಗಿ ಗ್ರಾಮ ಪಂಚಾಯತಿ ಕಾರ್ಯದರ್ಶಿಗೆ ಮನವಿ ನೀಡಿದರು.
ಪಂಚಾಯತಿ ಸಹಿತ ಹಲವು ಕಚೇರಿಗಳು ಕಾರ್ಯಾಚರಿಸುತ್ತಿರುವ ಈ ಪ್ರದೇಶದಿಂದ ಪೆರ್ಲಕ್ಕೆ ತೆರಳುವ ಭಾಗದಲ್ಲಿ ಬಸ್ ತಂಗುದಾಣ ಹಲವಾರು ವರ್ಷಗಳ ಹಿಂದೆಯೇ ನಿರ್ಮಾಣ ಮಾಡಲಾಗಿದೆ. ಆದರೆ ಸೀತಾಂಗೊಳಿ ಭಾಗಕ್ಕೆ ತೆರಳುವವರು ಮಳೆ, ಗಾಳಿ ಬಿಸಿಲೆನ್ನದೆ ರಸ್ತೆ ಬದಿಯಲ್ಲಿ ನಿಲ್ಲುವಂತಹ ದುಸ್ಥಿತಿ ಮುಂದುವರಿದಿದೆ. ಮಹಿಳೆಯರು ಮತ್ತು ವೃದ್ಧರು ಬಸ್ಸಿಗಾಗಿ ವಿರುದ್ಧ ದಿಕ್ಕಿನ ತಂಗುದಾಣದಲ್ಲಿ ಕುಳಿತು ಬಸ್ಸು ಬಂದ ಸಂದರ್ಭದಲ್ಲಿ ರಸ್ತೆ ದಾಟುತ್ತಿರುವುದು ಹಲವಾರು ಅಪಘಾತಗಳನ್ನು ಉಂಟು ಮಾಡಿದೆ.
ದಿನನಿತ್ಯ ಕಚೇರಿಗೆ ಆಗಮಿಸುವ ಜನಸಾಮಾನ್ಯರಿಗೆ ಇಷ್ಟೆಲ್ಲ ಸಮಸ್ಯೆಗಳು ಉಂಟಾಗಿದ್ದರೂ ಇದುವರೆಗೆ ಪರಿಹಾರ ಕಲ್ಪಿಸಲು ಸಾಧ್ಯವಾಗದಿರುವುದು ವಿಷಾದನೀಯ ಎಂದು ಬಿಜೆಪಿ ಜನಪ್ರತಿನಿಧಿ ಹಾಗು ಪಕ್ಷದ ಪಂಚಾಯತಿ ಸಮಿತಿ ಉಪಾಧ್ಯಕ್ಷ ಜನಾರ್ಧನ ಕಣ್ಣೂರು ಅಭಿಪ್ರಾಯಪಟ್ಟರು.
ಪಂಚಾಯತಿನ ವಿವಿಧ ಆಡಳಿತ ಮಂಡಳಿ ಸಭೆಗಳಲ್ಲಿ ಈ ವಿಷಯವನ್ನು ಪ್ರಸ್ತಾಪಸಿದ್ದರೂ ಇದುವರೆಗೆ ಯಾವುದೇ ಅನುದಾನವನ್ನು ಮೀಸಲಿಟ್ಟಿಲ್ಲ. ಶೀಘ್ರ ಪುತ್ತಿಗೆ ಗ್ರಾಮ ಪಂಚಾಯತಿ ವತಿಯಿಂದ ಸುಸಜ್ಜಿತವಾದ ಬಸ್ ತಂಗುದಾಣವನ್ನು ನಿರ್ಮಿಸಿ ಜನರಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು ಎಂದು ಪತ್ರದ ಮೂಲಕ ಕೇಳಿಕೊಂಡರು. ಈ ಸಂದರ್ಭದಲ್ಲಿ ಬಿಜೆಪಿ ಜನಪ್ರತಿನಿಧಿಗಳಾದ ಕಾವ್ಯಶ್ರೀ, ಜಯಂತಿ ಹಳೆಮನೆ,ಅನಿತಶ್ರೀ ಉಪಸ್ಥಿತರಿದ್ದರು.