ಕಾಸರಗೋಡು: ಜಿಲ್ಲೆಯ ಪೈವಳಿಕೆ ಹಾಗೂ ಮೀಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಪಟೈಟಿಸ್ ಎ ವರದಿಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾಗ್ರತೆ ಪಾಲಿಸುವಂತೆ ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಎ.ವಿ.ರಾಮದಾಸ್ ಮಾಹಿತಿ ನೀಡಿದ್ದಾರೆ.
ಪೈವಳಿಗೆ ಗ್ರಾ.ಪಂ.ನಲ್ಲಿ 39 ಹಾಗೂ ಮೀಂಜ ಪಂಚಾಯಿತಿ ವ್ಯಾಪ್ತಿಯ 15 ಮಂದಿಯಲ್ಲಿ ಹಳದಿ ಪಿತ್ತರಸ ಎ ಪತ್ತೆಯಾಗಿದ್ದು, ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಚಟುವಟಿಕೆಗಳನ್ನು ತೀವ್ರಗೊಳಿಸಲಾಗಿದೆ. ಶಾಸಕರು, ಇತರೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಆರೋಗ್ಯ ಕಾರ್ಯಕರ್ತರ ಸಭೆ ಕರೆದು ಪರಿಸ್ಥಿತಿ ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಪೆರಿಯಾ ಕೇಂದ್ರೀಯ ವಿಶ್ವವಿದ್ಯಾಲಯದ ವೈರಾಲಜಿ ವಿಭಾಗದ ವೈದ್ಯರು ಮತ್ತು ತಜ್ಞರನ್ನೊಳಗೊಂಡ ತಂಡ ಸೋಮವಾರ ಸ್ಥಳಕ್ಕೆ ಭೇಟಿ ನೀಡಲಿದೆ. ಹೆಪಟೈಟಿಸ್ ಎ (ಎಚ್.ಎ.ಪಿ) ವೈರಸ್ ಈ ಕಾಯಿಲೆಗೆ ಪ್ರಮುಖ ಕಾರಣವಾಗಿದೆ. ಇದು ಕಲುಷಿತ ನೀರು ಮತ್ತು ಆಹಾರದ ಮೂಲಕ ಹರಡುತ್ತಿದ್ದು, ವೈರಸ್ ದೇಹವನ್ನು ಪ್ರವೇಶಿಸಿದ 2 ರಿಂದ 6 ವಾರಗಳ ನಂತರ ಹೆಪಟೈಟಿಸ್ ಎ ಯ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ರೋಗಲಕ್ಷಣಗಳು ಸಾಮಾನ್ಯವಾಗಿ 2 ರಿಂದ 12 ವಾರಗಳವರೆಗೆ ಇರುತ್ತದೆ.
ಚರ್ಮ ಮತ್ತು ಕಣ್ಣುಗಳ ಹಳದಿ ಬಣ್ಣಕ್ಕೆ ತಿರುಗುವುದು, ಗಾಢ ಬಣ್ಣದ ಮೂತ್ರ, ಅತಿಯಾದ ಬಳಲಿಕೆ, ವಾಕರಿಕೆ, ವಾಂತಿ, ಹೊಟ್ಟೆಯುಬ್ಬರಿಸುವಿಕೆ, ತಲೆನೋವು, ಸ್ನಾಯು ಸೆಳೆತ, ಜ್ವರ ಪ್ರಮುಖ ರೋಗಲಕ್ಷಣವಾಗಿದೆ. ಶುಚಿತ್ವ ಪಾಲನೆ, ಕುದಿಸಿ ತಣಿಸಿದ ನೀರಿನ ಸೇವನೆ, ರೋಗ ಲಕ್ಷಣ ಕಂಡುಬಂದಲ್ಲಿ ತಕ್ಷಣ ಸನಿಹದ ಆರೋಗ್ಯ ಕೇಂದ್ರಗಳಿಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಹೆಪಟೈಟಿಸ್ ಎ ರೋಗಲಕ್ಷಣಗಳು ತೀವ್ರವಾಗಿದ್ದರೆ, ಅದು ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ ಎಂದೂ ತಿಳಿಸಿದ್ದಾರೆ.